ಕ್ರೀಡೆ

ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲುವಿನ ಯುಗಾದಿ, ರಾಜಸ್ಥಾನ ರಾಯಲ್ಸ್ ಎದುರು 4 ರನ್ ಜಯ

ಮುಂಬೈ: ಬ್ಯಾಟ್ಸ್‌ಮನ್‌ಗಳ ರೌದ್ರಾವತಾರಕ್ಕೆ ಸಾಕ್ಷಿಯಾದ ಹಣಾಹಣಿಯಲ್ಲಿ ಕಡೇ ಕ್ಷಣದಲ್ಲಿ ಮೇಲುಗೈ ಸಾಧಿಸಿದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-14ರಲ್ಲಿ ಶುಭಾರಂಭ ಕಂಡಿತು. ನಾಯಕ ಸಂಜು ಸ್ಯಾಮ್ಸನ್ (119ರನ್, 63 ಎಸೆತ, 12 ಬೌಂಡರಿ, 7 ಸಿಕ್ಸರ್) ಆಕರ್ಷಕ ಶತಕದಾಟದ ನಡುವೆಯೂ 2008ರ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ 4 ರನ್‌ಗಳಿಂದ ವೀರೋಚಿತ ಸೋಲು ಕಂಡಿತು. ವೈಯಕ್ತಿಕ ಮೊತ್ತ 12 ಹಾಗೂ 35 ರನ್‌ಗಳಿಸಿದ್ದ ವೇಳೆ ಸಿಕ್ಕ ಜೀವದಾನದ ಲಾಭ ಗಿಟ್ಟಿಸಿಕೊಂಡ ಸ್ಯಾಮ್ಸನ್ ತಂಡದ ಗೆಲುವಿಗೆ ಅಂತಿಮ ಹಂತದವರೆಗೂ ಹೋರಾಡಿದರೂ ಪ್ರಯೋಜನವಾಗಲಿಲ್ಲ. ಐಪಿಎಲ್ ಇತಿಹಾಸದಲ್ಲಿಯೇ ಎರಡನೇ ಅಧಿಕ ಮೊತ್ತ ಬೆನ್ನಟ್ಟುವ ಅವಕಾಶ ತಪ್ಪಿಸಿಕೊಂಡಿತು.

ವಾಂಖೆಡೆ ಮೈದಾನದ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ, ನಾಯಕ ಕೆಎಲ್ ರಾಹುಲ್ (91ರನ್, 50 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ದೀಪಕ್ ಹೂಡಾ (64ರನ್, 28 ಎಸೆತ, 4 ಬೌಂಡರಿ, 6 ಸಿಕ್ಸರ್) ಜೋಡಿ ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 221 ರನ್ ಪೇರಿಸಿತು. ಪ್ರತಿಯಾಗಿ ರಾಜಸ್ಥಾನ ರಾಯಲ್ಸ್ ತಂಡ ಆರಂಭಿಕ ಆಘಾತದ ನಡುವೆಯೂ 7 ವಿಕೆಟ್‌ಗೆ 217 ರನ್‌ಗಳಿಸಲಷ್ಟೇ ಶಕ್ತವಾಯಿತು.

ಪಂಜಾಬ್ ಕಿಂಗ್ಸ್: 6 ವಿಕೆಟ್‌ಎಗ 221 (ರಾಹುಲ್ 91, ಮಯಾಂಕ್ 14, ಕ್ರಿಸ್ ಗೇಲ್ 40, ದೀಪಕ್ ಹೂಡಾ 64, ಚೇತನ್ ಸಕಾರಿಯ 31ಕ್ಕೆ 3, ಕ್ರಿಸ್ ಮಾರಿಸ್ 41ಕ್ಕೆ 2, ರಿಯಾನ್ ಪರಾಗ್ 7ಕ್ಕೆ 1), ರಾಜಸ್ಥಾನ ರಾಯಲ್ಸ್: 7 ವಿಕೆಟ್‌ಗೆ 217 (ಸಂಜು ಸ್ಯಾಮ್ಸನ್ 119, ಜೋಸ್ ಬಟ್ಲರ್ 25, ಶಿವಂ ದುಬೆ 23, ರಿಯಾನ್ ಪರಾಗ್ 25, ಅರ್ಷದೀಪ್ ಸಿಂಗ್ 35ಕ್ಕೆ 3, ಮೊಹಮದ್ ಶಮಿ 33ಕ್ಕೆ 2).