ದುಬೈ: ಭಾನುವಾರದ ಎರಡೂ ಪಂದ್ಯಗಳು ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದವು. ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಿನದ ಎರಡೂ ಪಂದ್ಯಗಳು ಟೈ ಆದ ದೃಷ್ಟಾಂತ ಅರಬ್‌ನಾಡಿನಲ್ಲಿ ದಾಖಲಾಯಿತು. ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಕೋಲ್ಕತ ನೈಟ್ ರೈಡರ್ಸ್ ಜಯ ದಾಖಲಿಸಿದರೆ, ದುಬೈನಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಮುಂಬೈ ಇಂಡಿಯನ್ಸ್ ತಂಡವನ್ನು ಡಬಲ್ ಸೂಪರ್ ಓವರ್‌ನಲ್ಲಿ ಮಣಿಸಿತು.
ಸೂಪರ್ ಓವರ್ ಟೈಗೊಂಡ ಹಿನ್ನೆಲೆಯಲ್ಲಿ 2ನೇ ಬಾರಿಗೆ ನಡೆದ ಸೂಪರ್ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ 11 ರನ್ ಟಾರ್ಗೆಟ್ ನೀಡಿತು. ಪಂಜಾಬ್ ತಂಡದ ಪರ ಕ್ರಿಸ್ ಗೇಲ್ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಇನ್ನು 2 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿತು. ಇದಕ್ಕೂ ಮುನ್ನ ನಡೆದ ಮೊದಲ ಸೂಪರ್ ಓವರ್‌ನಲ್ಲಿ ಎರಡೂ ತಂಡಗಳು ತಲಾ 5 ರನ್ ಗಳಿಸಿ ಟೈ ಸಾಧಿಸಿದ್ದವು.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ, ವಿಕೆಟ್ ಕೀಪರ್-ಆರಂಭಿಕ ಕ್ವಿಂಟನ್ ಡಿಕಾಕ್ (53 ರನ್, 43 ಎಸೆತ, 3 ಬೌಂಡರಿ, 3 ಸಿಕ್ಸರ್) ಸಮಯೋಚಿತ ಇನಿಂಗ್ಸ್ ಹಾಗೂ ಡೆತ್ ಓವರ್‌ಗಳಲ್ಲಿ ಕೈರಾನ್ ಪೊಲ್ಲಾರ್ಡ್ (34*ರನ್, 12 ಎಸೆತ, 1 ಬೌಂಡರಿ, 4 ಸಿಕ್ಸರ್) ಮತ್ತು ನಾಥನ್ ಕೌಲ್ಟರ್ ನಿಲ್ (24*ರನ್, 12 ಎಸೆತ, 4 ಬೌಂಡರಿ) ಜೋಡಿಯ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ, 6 ವಿಕೆಟ್‌ಗೆ 176 ರನ್ ಕಲೆಹಾಕಿತು. ಪ್ರತಿಯಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಕನ್ನಡಿಗ ಕೆಎಲ್ ರಾಹುಲ್ (77ರನ್, 51ಎಸೆತ, 7 ಬೌಂಡರಿ, 3 ಸಿಕ್ಸರ್) ಏಕಾಂಗಿ ನಿರ್ವಹಣೆ, ಕಡೇ ಹಂತದಲ್ಲಿ ದೀಪಕ್ ಹೂಡಾ (23*ರನ್, 16 ಎಸೆತ, 1 ಬೌಂಡರಿ, 1 ಸಿಕ್ಸರ್) ಹೋರಾಟದ ನಡುವೆಯೂ 6 ವಿಕೆಟ್‌ಗೆ 176 ರನ್‌ಗಳಿಸಿತು.
ಪಂದ್ಯ ಸವಿವರ ವರದಿಗೆ ವಿಜಯವಾಣಿ ಓದಿ..