ಮುಲ್ಲನ್ಪುರ: ಬ್ಯಾಟಿಂಗ್ ವೈಫಲ್ಯದಿಂದ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟರೂ, ಕೊನೇ ಓವರ್ವರೆಗೂ ದಿಟ್ಟ ಹೋರಾಟ ನಡೆಸಲು ನೆರವಾದ ಬೌಲಿಂಗ್ ಮತ್ತು ಫೀಲ್ಡಿಂಗ್ ನಿರ್ವಹಣೆಯನ್ನು ಪಂಜಾಬ್ ಕಿಂಗ್ಸ್ ತಂಡದ ಹಂಗಾಮಿ ನಾಯಕ ಸ್ಯಾಮ್ ಕರ್ರನ್ ಮೆಚ್ಚಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧ 3 ವಿಕೆಟ್ಗಳಿಂದ ವೀರೋಚಿತ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಸ್ಯಾಮ್ ಕರ್ರನ್, "ಪಿಚ್ ನಿಧಾನಗತಿಯದ್ದಾಗಿತ್ತು. ಬ್ಯಾಟಿಂಗ್ನಲ್ಲಿ ಉತ್ತಮ ಆರಂಭ ಸಿಗದಿದ್ದರೂ, ಉತ್ತಮವಾಗಿಯೇ ಇನಿಂಗ್ಸ್ ಮುಗಿಸಿದೆವು. 150ರ ಸನಿಹದ ಮೊತ್ತ ಪೇರಿಸಿದ್ದರಿಂದ ನಿಕಟ ಹೋರಾಟ ತೋರುವ ವಿಶ್ವಾಸವಿತ್ತು. ಈ ನಿಕಟ ಪಂದ್ಯವನ್ನು ಗೆಲ್ಲದಿದ್ದರೂ, ಹಲವು ಸಕಾರಾತ್ಮಕ ಅಂಶಗಳು ಲಭಿಸಿವೆ. ಸೋಲಿನಿಂದ ಸ್ವಲ್ಪ ನಿರಾಸೆಯಾಗಿದ್ದರೂ, ಪುಟಿದೆದ್ದು ಬರುವ ವಿಶ್ವಾಸ ಮೂಡಿಸಿದೆ' ಎಂದು ಹೇಳಿದ್ದಾರೆ.
148 ರನ್ ಸವಾಲಿಗೆ ಪ್ರತಿಯಾಗಿ ಯಶಸ್ವಿ ಜೈಸ್ವಾಲ್ (39) ಮತ್ತು ತನುಷ್ ಕೋಟ್ಯಾನ್ (24) ರಾಯಲ್ಸ್ಗೆ ಎಚ್ಚರಿಕೆಯ ಆರಂಭ ಒದಗಿಸಿದರು. ಬಳಿಕ ಸಂಜು ಸ್ಯಾಮ್ಸನ್ (18), ರಿಯಾನ್ ಪರಾಗ್ (23), ಧ್ರುವ ಜುರೆಲ್ ಹೆಚ್ಚು ಸಮಯ ಕ್ರೀಸ್ನಲ್ಲಿ ನಿಲ್ಲಲಿಲ್ಲ. ಇದರಿಂದ ರಾಯಲ್ಸ್, ಕೊನೇ 16 ಎಸೆತಗಳಲ್ಲಿ 33 ರನ್ ಗಳಿಸುವ ಒತ್ತಡಕ್ಕೆ ಸಿಲುಕಿತು. ಆಗ ಒಂದೆಡೆ ಭದ್ರವಾಗಿ ನಿಂತ ಶಿಮ್ರೊನ್ ಹೆಟ್ಮೆಯರ್ (27*ರನ್, 10 ಎಸೆತ, 1 ಬೌಂಡರಿ, 3 ಸಿಕ್ಸರ್) ಒಂದು ಎಸೆತ ಬಾಕಿ ಇರುವಂತೆಯೇ 7 ವಿಕೆಟ್ ನಷ್ಟದಲ್ಲಿ ತಂಡವನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರು. ಕೊನೇ ಓವರ್ನಲ್ಲಿ 10 ರನ್ ಬೇಕಿದ್ದಾಗ ಅರ್ಷದೀಪ್ ಎಸೆದ ಮೊದಲ 2 ಎಸೆತಗಳಲ್ಲಿ ರನ್ ಗಳಿಸದಿದ್ದರೂ, ನಂತರ 3 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ ಹೆಟ್ಮೆಯರ್ ಗೆಲುವು ತಂದರು.
ಕಳೆದ ಪಂದ್ಯದಲ್ಲಿ ನಾವು ಉತ್ತಮ ನಿರ್ವಹಣೆ ತೋರಿದರೂ ಸೋತೆವು. ಈ ಬಾರಿ ನಾವು ಅದಕ್ಕಿಂತ ಹೆಚ್ಚು ತಪು$್ಪಗಳನ್ನು ಮಾಡಿದರೂ ಗೆದ್ದೆವು. ಕ್ರಿಕೆಟ್ ಒಂದು ತಮಾಷೆಯ ಆಟ. ಹೆಟ್ಮೆಯರ್ ಕ್ರೀಸ್ನಲ್ಲಿದ್ದ ಕಾರಣ ಗೆಲುವಿನ ವಿಶ್ವಾಸವಿತ್ತು ಎಂದು ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಹೇಳಿದ್ದಾರೆ.