ಕ್ರೀಡೆ

ಪಂಜಾಬ್ ಗೆಲ್ಲಿಸಿದ ಪ್ರಭ್‌ಸಿಮ್ರನ್, ಅರ್ಷದೀಪ್: ರಿಷಭ್ ಪಂತ್ ಪಡೆ ಪ್ಲೇಆಫ್ ಹಾದಿ ದುರ್ಗಮ

ಧರ್ಮಶಾಲಾ: ಆರಂಭಿಕ ಪ್ರಭ್‌ಸಿಮ್ರನ್ ಸಿಂಗ್ (91 ರನ್, 48 ಎಸೆತ, 6 ಬೌಂಡರಿ, 7 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಹಾಗೂ ಎಡಗೈ ವೇಗಿ ಅರ್ಷದೀಪ್ ಸಿಂಗ್ (16ಕ್ಕೆ 3) ಬಿಗಿ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಲಖನೌ ಸೂಪರ್‌ಜೈಂಟ್ಸ್ ಎದುರು ಬೌಂಡರಿ-ಸಿಕ್ಸರ್‌ಗಳ ಮಳೆ ಹರಿಸಿ 37 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಶ್ರೇಯಸ್ ಅಯ್ಯರ್ ಪಡೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಪ್ಲೇಆ್ ಅವಕಾಶವೂ ವೃದ್ಧಿಸಿಕೊಂಡಿದೆ. ಟೂರ್ನಿಯಲ್ಲಿ 6ನೇ ಸೋಲು ಎದುರಿಸಿದ ಲಖನೌ ಪಾಲಿಗೆ ಉಳಿದ ಪಂದ್ಯಗಳು ಮಾಡು ಇಲ್ಲವೇ ಮಡಿ ಎನಿಸಿವೆ.

ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಪಂಜಾಬ್ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಎಡಗೈ ವೇಗಿ ಆಕಾಶ್ ಮಹಾರಾಜ್ ಸಿಂಗ್ (30ಕ್ಕೆ 2) ನೀಡಿದ ಆರಂಭಿಕ ಆಘಾತದ ನಡುವೆಯೂ ಪ್ರಭ್‌ಸಿಮ್ರನ್ ಹಾಗೂ ಶ್ರೇಯಸ್ ಅಯ್ಯರ್ (45 ರನ್, 25 ಎಸೆತ, 4 ಬೌಂಡರಿ, 2 ಸಿಕ್ಸರ್) ರನ್‌ಗಳಿಕೆಗೆ ವೇಗ ನೀಡಿದರು. ಸ್ಲಾಗ್ ಓವರ್‌ಗಳಲ್ಲಿ ಶಶಾಂಕ್ ಸಿಂಗ್ (33* ರನ್, 15 ಎಸೆತ, 4 ಬೌಂಡರಿ, 1 ಸಿಕ್ಸರ್) ಬಿರುಸಿನಾಟದ ಬಲದಿಂದ ಪಂಜಾಬ್ ಕಿಂಗ್ಸ್ 5 ವಿಕೆಟ್‌ಗೆ 236 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಪ್ರತಿಯಾಗಿ ಅರ್ಷದೀಪ್ ಸಿಂಗ್ ಮಾರಕ ದಾಳಿಗೆ ತತ್ತರಿಸಿದ ಲಖನೌ ಸೂಪರ್ ಜೈಂಟ್ಸ್ 58 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಪರದಾಡಿತು. ಆಯುಷ್ ಬಡೋನಿ (74 ರನ್, 40 ಎಸೆತ, 5 ಬೌಂಡರಿ, 5 ಸಿಕ್ಸರ್) ಹಾಗೂ ಅಬ್ದುಲ್ ಸಮದ್ (45 ರನ್, 24 ಎಸೆತ, 2 ಬೌಂಡರಿ, 4 ಸಿಕ್ಸರ್) ಪ್ರತಿರೋಧ ನಡುವೆಯೂ 7 ವಿಕೆಟ್‌ಗೆ 199 ರನ್‌ಗಳಿಸಲಷ್ಟೇ ಶಕ್ತಗೊಂಡಿತು. ಇದರೊಂದಿಗೆ ಪಂಜಾಬ್ 2013ರ ಬಳಿಕ ಧರ್ಮಶಾಲಾದಲ್ಲಿ ಗೆಲುವಿನ ನಗೆ ಬೀರಿತು.