ದುಬೈ: ಕರ್ನಾಟಕದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಮಯಾಂಕ್ ಅಗರ್ವಾಲ್ (67 ರನ್, 43 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಕೆಎಲ್ ರಾಹುಲ್ (49 ರನ್, 33 ಎಸೆತ, 4 ಬೌಂಡರಿ,2 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ನಡುವೆಯೂ ಕಡೇ ಓವರ್‌ನಲ್ಲಿ 4 ರನ್ ಪೇರಿಸಲು ವಿಫಲವಾದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-14ರ 2ನೇ ಭಾಗದ ಮೊದಲ ಹಣಾಹಣಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 2 ರನ್‌ಗಳಿಂದ ಮುಗ್ಗರಿಸಿತು. ಕಡೇ ಓವರ್ ಎಸೆದ ಕಾರ್ತಿಕ್ ತ್ಯಾಗಿ ಕೇವಲ 1 ರನ್ ನೀಡಿ 2 ವಿಕೆಟ್ ಕಬಳಿಸಿ ರಾಜಸ್ಥಾನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸೋಲಿನೊಂದಿಗೆ ಪಂಜಾಬ್ ತಂಡದ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣಗೊಂಡರೆ, ರಾಜಸ್ಥಾನ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.
ದುಬೈ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ, ಉತ್ತಮ ಆರಂಭದಿಂದ 200 ಪ್ಲಸ್ ಮೊತ್ತದತ್ತ ಮುನ್ನಡೆದರೂ, ಸ್ಲಾಗ್ ಓವರ್‌ಗಳಲ್ಲಿ ಅರ್ಷದೀಪ್ ಸಿಂಗ್ (32ಕ್ಕೆ 5) ಹಾಗೂ ಮೊಹಮದ್ ಶಮಿ (21ಕ್ಕೆ 3) ಜೋಡಿಯ ದಾಳಿಗೆ ನಲುಗಿ 20 ಓವರ್‌ಗಳಲ್ಲಿ 185 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಪಂಜಾಬ್ ತಂಡ, ಉತ್ತಮ ಆರಂಭದ ನಡುವೆಯೂ ಕಡೇ ಹಂತದಲ್ಲಿ ಎಡವಿ 4 ವಿಕೆಟ್‌ಗೆ 183 ರನ್‌ಗಳಿಸಲಷ್ಟೇ ಶಕ್ತವಾಯಿತು.
ರಾಜಸ್ಥಾನ ರಾಯಲ್ಸ್: 20 ಓವರ್‌ಗಳಲ್ಲಿ 185 (ಎವಿನ್ ಲೆವಿಸ್ 36, ಯಶಸ್ವಿ ಜೈಸ್ವಾಲ್ 49, ಮಹಿಪಾಲ್ ಲೊಮ್ರೊರ್ 43, ಮೊಹಮದ್ ಶಮಿ 21ಕ್ಕೆ 3, ಅರ್ಷದೀಪ್ ಸಿಂಗ್ 32ಕ್ಕೆ 5), ಪಂಜಾಬ್ ಕಿಂಗ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 183 (ಕೆಎಲ್ ರಾಹುಲ್ 49, ಮಯಾಂಕ್ ಅಗರ್ವಾಲ್ 67, ಏಡನ್ ಮಾರ್ಕ್ರಮ್ 26*, ನಿಕೋಲಸ್ ಪೂರನ್ 32, ಕಾರ್ತಿಕ್ ತ್ಯಾಗಿ 29ಕ್ಕೆ 2).