ದುಬೈ: ಪ್ಲೇಆಫ್ ಹಂತಕ್ಕೇರುವ ಕೂದಲೆಳೆ ಅವಕಾಶ ಹೊಂದಿರುವ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-14ರ ಎರಡನೇ ಚರಣದ ಹಣಾಹಣಿಯಲ್ಲಿ ಮಂಗಳವಾರ ಎದುರಾಗಲಿವೆ. ಉಭಯ ತಂಡಗಳು ದುಬೈ ಮೈದಾನದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಅಂಕಪಟ್ಟಿಯಲ್ಲಿ ಮಧ್ಯ ಭಾಗದಲ್ಲಿರುವ 2 ತಂಡಗಳಿಗೂ ಈ ಪಂದ್ಯ ನಿಣಾರ್ಯಕವಾಗಿದೆ. ಕನ್ನಡಿಗರಾದ ಅನಿಲ್ ಕುಂಬ್ಳೆ ಮಾರ್ಗದರ್ಶನ ಹಾಗೂ ಕೆಎಲ್ ರಾಹುಲ್ ಸಾರಥ್ಯದ ಪಂಜಾಬ್ ತಂಡ ಮೇಲ್ನೋಟಕ್ಕೆ ಬಲಿಷ್ಠವಾಗಿದ್ದು, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೇ ಪ್ರಮುಖ ಶಕ್ತಿಯಾಗಿದ್ದಾರೆ. ಮತ್ತೊಂದೆಡೆ, ಪ್ರಮುಖ ವಿದೇಶಿ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ರಾಜಸ್ಥಾನ ರಾಯಲ್ಸ್‌ಗೆ ತಂಡದ ಸಂಯೋಜನೆಯೇ ದೊಡ್ಡ ತಲೆನೋವಾಗಿದೆ.
ವೇಗಿಗಳಿಗೆ ನೆರವಾಗುವ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಕದನ ಎಂದೇ ವಿಶ್ಲೇಷಿಸಲಾಗುತ್ತಿದೆ. ಟೂರ್ನಿಯ ಮೊದಲ ಭಾಗದ ವೇಳೆ ಗಾಯಗೊಂಡು ಹೊರಬಿದ್ದಿದ್ದ ಕೆಎಲ್ ರಾಹುಲ್, 2ನೇ ಭಾಗಕ್ಕೆ ಪೂರ್ಣ ಫಿಟ್ ಆಗಿ ಪಂಜಾಬ್ ತಂಡಕ್ಕೆ ಲಭ್ಯರಾಗಿರುವುದು ವರದಾನವಾಗಬಹುದು. ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಜತೆಗೂಡಿ ಅವರು ಇನಿಂಗ್ಸ್ ಆರಂಭಿಸಲಿದ್ದು, ಟಿ20 ದೈತ್ಯ 41 ವರ್ಷದ ಕ್ರಿಸ್ ಗೇಲ್, ದೀಪಕ್ ಹೂಡಾ, ಪೂರನ್ ಮತ್ತು ಶಾರೂಖ್ ಖಾನ್ ಕೂಡ ಬ್ಯಾಟಿಂಗ್‌ಗೆ ಬಲ ತುಂಬಲಿದ್ದಾರೆ.
ಸಂಭಾವ್ಯ ತಂಡಗಳು:
ಪಂಜಾಬ್ ಕಿಂಗ್ಸ್: ಕೆಎಲ್ ರಾಹುಲ್ (ನಾಯಕ, ವಿಕೀ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಶಾರುಖ್ ಖಾನ್, ಫ್ಯಾಬಿಯನ್ ಅಲೆನ್/ಆದಿಲ್ ರಶೀದ್, ರವಿ ಬಿಷ್ಣೋಯಿ, ಅರ್ಷ್‌ದೀಪ್ ಸಿಂಗ್, ನಾಥನ್ ಎಲಿಸ್, ಮೊಹಮದ್ ಶಮಿ.
ರಾಜಸ್ಥಾನ ರಾಯಲ್ಸ್: ಎವಿನ್ ಲೆವಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ, ವಿಕೀ), ಲಿಯಾಮ್ ಲಿವಿಂಗ್‌ಸ್ಟೋನ್, ರಿಯಾನ್ ಪರಾಗ್, ಶಿವಂ ದುಬೆ, ಕ್ರಿಸ್ ಮಾರಿಸ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ, ಮುಸ್ತಾಫಿಜುರ್, ಚೇತನ್ ಸಕಾರಿಯ/ಜೈದೇವ್ ಉನಾದ್ಕತ್.
ಮುಖಾಮುಖಿ: 22, ಪಂಜಾಬ್: 10, ರಾಜಸ್ಥಾನ: 12
ಮೊದಲ ಮುಖಾಮುಖಿ: ಪಂಜಾಬ್‌ಗೆ 4 ರನ್ ಜಯ.
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್