ಕ್ರೀಡೆ

ಪರಸ್ಪರ ಬೆನ್ನಿಗೆ ಇರಿಯುವುದು, ಕೆಟ್ಟದಾಗಿ ಮಾತನಾಡುವುದು ತುಂಬಾ ಸುಲಭ: ಭಾವುಕರಾದ ಶ್ರೇಯಸ್ ಅಯ್ಯರ್! Shreyas Iyer

Shreyas Iyer : ಬರೋಬ್ಬರಿ ಹತ್ತು ವರ್ಷಗಳ ಬಳಿಕ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್​ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ನಿನ್ನೆ (ಮೇ 26) ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನೊಂದಿಗೆ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ ಅಗ್ರ-1 ಸ್ಥಾನವನ್ನು ಪಡೆದುಕೊಂಡಿತು. ಈ ಮೂಲಕ ಫ್ಲೇಆಫ್​ನಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಮುಂದಿನ ಪ್ಲೇಆಫ್​ ಸುತ್ತಿನಲ್ಲಿ ಒಂದು ಪಂದ್ಯವನ್ನು ಗೆದ್ದರೆ ಸಾಕು ಪಂಜಾಬ್​ ತಂಡ ನೇರವಾಗಿ ಫೈನಲ್​ಗೆ ಪ್ರವೇಶ ಪಡೆಯಲಿದೆ. ಈ ಮೂಲಕ ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆಯುವ ತವಕದಲ್ಲಿದೆ. ನಿನ್ನೆ ಮುಂಬೈ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೇ ಶ್ರೇಯಸ್ ಅಯ್ಯರ್, ತಮ್ಮ ತಂಡದ ಆಟಗಾರರನ್ನು ಹೊಗಳಿದರು. ಐಪಿಎಲ್ 2025 ರಲ್ಲಿ ತಂಡದ ಅತ್ಯುತ್ತಮ ಪ್ರದರ್ಶನವು ಪ್ರತಿಯೊಬ್ಬ ಆಟಗಾರನ ವಿಶ್ವಾಸವನ್ನು ಗಳಿಸಲು ಸಹಾಯ ಮಾಡಿತು ಎಂದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಿತು. ಸೂರ್ಯಕುಮಾರ್ (57 ರನ್​, 39 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (26 ರನ್​, 15 ಎಸೆತ, 2 ಬೌಂಡರಿ, 2 ಸಿಕ್ಸರ್) ಉಪಯುಕ್ತ ಆಟವಾಡಿದರು. ಪಂಜಾಬ್​ ಪರ ಅರ್ಷದೀಪ್​ ಸಿಂಗ್​, ಜಾನ್ಸೆನ್ ಮತ್ತು ವೈಶಾಕ್ ತಲಾ 2 ವಿಕೆಟ್ ಪಡೆದರು.

ನಂತರ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ 18.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಜಯ ಸಾಧಿಸಿತು. ಜೋಶ್ ಇಂಗ್ಲಿಸ್ (73 ರನ್​, 42 ಎಸೆತ 9 ಬೌಂಡರಿ, 3 ಸಿಕ್ಸರ್) ಮತ್ತು ಪ್ರಿಯಾಂಶ್ ಆರ್ಯ (62 ರನ್​, 35 ಎಸೆತ, 9 ಬೌಂಡರಿ, 2 ಸಿಕ್ಸರ್) ಅವರ ಸ್ಫೋಟಕ ಆಟದ ನೆರವಿನಿಂದ ಭರ್ಜರಿ ಜಯ ದಾಖಲಿಸಿತು. ಮುಂಬೈ ಬೌಲರ್‌ಗಳಲ್ಲಿ ಮಿಚೆಲ್​ ಸ್ಯಾಂಟ್ನರ್ ಎರಡು ವಿಕೆಟ್ ಪಡೆದರೆ, ಬುಮ್ರಾ ಒಂದು ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ, ಪಂಜಾಬ್ ಕಿಂಗ್ಸ್ 2014ರ ನಂತರ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಪ್ಲೇಆಫ್ ತಲುಪಿದೆ. ಮೇ 29 ರಂದು ನಡೆಯಲಿರುವ ಕ್ವಾಲಿಫೈಯರ್ 1 ಗಾಗಿ ಅವರು ಮುಲ್ಲನ್‌ಪುರದಲ್ಲಿರುವ ತಮ್ಮ ತವರು ಮೈದಾನಕ್ಕೆ ಪ್ರಯಾಣಿಸಲಿದ್ದಾರೆ.

ಗೆಲ್ಲಬೇಕೆಂಬ ಮನಸ್ಥಿತಿಯಲ್ಲಿ ತಂಡವಿದೆ

ಇದೇ ಸಂದರ್ಭದಲ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್, ಮುಂಬೈ ವಿರುದ್ಧದ ಗೆಲುವು ಮತ್ತು ಅರ್ಹತಾ ಸುತ್ತಿಗೆ ಅರ್ಹತೆ ಪಡೆದ ಬಗ್ಗೆ ಪ್ರತಿಕ್ರಿಯಿಸಿದರು. ಎಲ್ಲರೂ ಜವಾಬ್ದಾರಿಯನ್ನು ತೆಗೆದುಕೊಂಡು ಸರಿಯಾದ ಸಮಯದಲ್ಲಿ ಆಡಿದ್ದಾರೆಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಯಾವುದೇ ಪರಿಸ್ಥಿತಿಯಲ್ಲಿ ನಾವು ಗೆಲ್ಲಬೇಕು ಎಂಬ ಮನಸ್ಥಿತಿಯಲ್ಲಿ ತಂಡವಿದೆ. ರಿಕಿ ಪಾಂಟಿಂಗ್ ನೇತೃತ್ವದ ತಂಡದ ಆಡಳಿತವು ಪಂಜಾಬ್ ಕಿಂಗ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅಯ್ಯರ್​ ಹೇಳಿದರು.

ಕೆಟ್ಟದಾಗಿ ಮಾತನಾಡುವುದು ಸುಲಭ

ಎಲ್ಲರ ವಿಶ್ವಾಸವನ್ನು ಗಳಿಸಿದ್ದು ಹೇಗೆ ಎಂಬುದರ ಕುರಿತು ಮಾತನಾಡಿದ ಅಯ್ಯರ್​, ಪಂದ್ಯಗಳನ್ನು ಗೆಲ್ಲುವುದರಿಂದ ಮಾತ್ರ ಇದು ಸಾಧ್ಯ ಎಂದರು. ಪ್ರತಿಯೊಬ್ಬ ಆಟಗಾರನೊಂದಿಗೆ ಮಾತನಾಡುವುದು ಮುಖ್ಯ. ಸವಾಲಿನ ಸಮಯದಲ್ಲಿ ಪರಸ್ಪರ ಬೆನ್ನಿಗೆ ಚೂರಿ ಹಾಕುವುದು ಮತ್ತು ಕೆಟ್ಟದಾಗಿ ಮಾತನಾಡುವುದು ಸುಲಭ. ಆದರೆ ನಾವು ಒಬ್ಬರನ್ನೊಬ್ಬರು ನಂಬಿದ್ದೇವೆ. ನಮ್ಮ ಸಂಬಂಧವನ್ನು ನಾವು ಮುಂದುವರಿಸಬೇಕೆಂದು ವೈಯಕ್ತಿಕವಾಗಿ ಭಾವಿಸುತ್ತೇನೆ ಎಂದು ಅಯ್ಯರ್​ ಭಾವುಕರಾಗಿ ಮಾತನಾಡಿದರು.

ಯುವ ಆಟಗಾರರು ನಿರ್ಭೀತರು

ಇದೇ ವೇಳೆ ಯುವ ಆಟಗಾರ ಪ್ರಿಯಾಂಶ್ ಆರ್ಯ ಬಗ್ಗೆ ಮಾತನಾಡಿದ ಅಯ್ಯರ್, ಅವರು ಆಟವನ್ನು ಪ್ರಾರಂಭಿಸಿದ ರೀತಿ ಅದ್ಭುತವಾಗಿತ್ತು. ಯುವ ಆಟಗಾರರು ನಿರ್ಭೀತರು. ಅವರು ನೆಟ್ಸ್‌ನಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅದರ ಫಲಿತಾಂಶಗಳು ಈಗ ಮೈದಾನದಲ್ಲಿ ಗೋಚರಿಸುತ್ತಿವೆ ಎಂದರು.

ಬ್ಯಾಟಿಂಗ್ ಸ್ಲಾಟ್ ಇಲ್ಲದ ಏಕೈಕ ಆಟಗಾರ

ಆಸ್ಟ್ರೇಲಿಯಾದ ಬ್ಯಾಟರ್​ ಜೋಸ್ ಇಂಗ್ಲಿಷ್ ಬಗ್ಗೆ ಮಾತನಾಡುತ್ತಾ, ಅವರು ಹೊಸ ಬಾಲ್​ಗಳನ್ನು ಆಡಲು ಇಷ್ಟಪಡುತ್ತಾರೆ. ಅವರು ಹೆಚ್ಚಿನ ಚೆಂಡುಗಳನ್ನು ಆಡಬೇಕೆಂದು ನಾವು ಭಾವಿಸುತ್ತೇವೆ. ನಿಗದಿತ ಬ್ಯಾಟಿಂಗ್ ಸ್ಲಾಟ್ ಇಲ್ಲದ ಏಕೈಕ ಆಟಗಾರ ಅವರು. ಅವರೊಬ್ಬ ಮ್ಯಾಚ್​ ವಿನ್ನರ್​. ಅವರು ಇದೇ ರೀತಿಯ ಪ್ರದರ್ಶನ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆಂದು ಶ್ರೇಯಸ್​ ಅಯ್ಯರ್ ಹೇಳಿದರು.

ಇತಿಹಾಸ ಸೃಷ್ಟಿಸಿದ ಶ್ರೇಯಸ್

ಐಪಿಎಲ್ ಇತಿಹಾಸದಲ್ಲಿ ಮೂರು ವಿಭಿನ್ನ ತಂಡಗಳನ್ನು ಅರ್ಹತಾ ಸುತ್ತಿಗೆ ಕರೆದೊಯ್ದ ಏಕೈಕ ನಾಯಕ ಶ್ರೇಯಸ್​ ಅಯ್ಯರ್. 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಜೊತೆ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಶ್ರೇಯಸ್, 2020ರ ಋತುವಿನಲ್ಲಿ ದೆಹಲಿ ತಂಡವನ್ನು ನಾಯಕನಾಗಿ ಎರಡನೇ ಸ್ಥಾನಕ್ಕೆ ಕರೆದೊಯ್ದರು. ಎರಡನೇ ಕ್ವಾಲಿಫೈಯರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ದುರದೃಷ್ಟವಶಾತ್ ಕೊನೆಯ ಹಂತದಲ್ಲಿ ಎಡವಿತು. ಇದಾದ ನಂತರ, ಶ್ರೇಯಸ್ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್-2024ರಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ, ಫೈನಲ್‌ನಲ್ಲಿ ಎಸ್‌ಆರ್‌ಎಚ್ ತಂಡವನ್ನು ಸೋಲಿಸಿ ಕೆಕೆಆರ್​ ತನ್ನ ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈಗ, ಪಂಜಾಬ್ ಅರ್ಹತಾ ಸುತ್ತಿಗೆ ಪ್ರವೇಶಿಸಿದ್ದು, ಐಪಿಎಲ್​ನಲ್ಲಿ ಮೂರು ವಿಭಿನ್ನ ತಂಡಗಳನ್ನು ಅರ್ಹತಾ ಸುತ್ತಿಗೆ ಕರೆದೊಯ್ದ ಏಕೈಕ ನಾಯಕನೆಂಬ ಇತಿಹಾಸವನ್ನು ಅಯ್ಯರ್​ ಬರೆದಿದ್ದಾರೆ. (ಏಜೆನ್ಸೀಸ್​)