ಕ್ರೀಡೆ

ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿ: ಜಯದ ಹಳಿಗೆ ಮರಳಿದ ಪುಣೇರಿ ಪಲ್ಟನ್

ನೋಯ್ಡಾ: ನಾಲ್ಕು ಬಾರಿ ಆಲೌಟ್‌ ಸೇರಿದಂತೆ ಸಂಘಟಿತ ಹೋರಾಟ ಪ್ರದರ್ಶಿಸಿದ ಪುಣೇರಿ ಪಲ್ಟನ್‌ ತಂಡ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ 73ನೇ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡವನ್ನು 17 ಅಂಕಗಳಿಂದ ಮಣಿಸಿ ವಿಜಯೋತ್ಸವ ಆಚರಿಸಿತು.

ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿಭಾನುವಾರ ನಡೆದ ಮೊದಲ ಪಂದ್ಯದಲ್ಲಿಕಳೆದ ಬಾರಿಯ ಚಾಂಪಿಯನ್‌ ಪುಣೇರಿ ಪಲ್ಟನ್‌ ತಂಡ 51-34 ಅಂಕಗಳಿಂದ ಬೆಂಗಾಲ್‌ ಹೋರಾಟವನ್ನು ಹತ್ತಿಕ್ಕಿತು. ಈ ಮೂಲಕ ಸತತ ನಾಲ್ಕು ಪಂದ್ಯಗಳ ನಂತರ ಗೆಲುವಿನ ಹಳಿಗೆ ಮರಳಿದ ಪುಣೇರಿ, ಟೂರ್ನಿಯಲ್ಲಿಆರನೇ ಜಯ ದಾಖಲಿಸಿ, 42 ಅಂಕಗಳನ್ನು ಕಲೆಹಾಕಿತು. ಅತ್ತ ಸತತ ನಾಲ್ಕನೇ ಸೋಲಿಗೆ ಗುರಿಯಾದ ಬೆಂಗಾಲ್‌, ಒಟ್ಟಾರೆ 7ನೇ ಸೋಲಿಗೆ ಒಳಗಾಯಿತು.

ಪುಣೇರಿ ಪಲ್ಟನ್‌ ತಂಡದ ಪರ ಆಕಾಶ್‌ ಶಿಂದೆ (9 ಅಂಕ), ಮೋಹಿತ್‌ ಗೊಯೆಟ್‌ (9 ಅಂಕ) ಮತ್ತು ಪಂಕಜ್‌ (6 ಅಂಕ) ಮಿಂಚಿದರೆ, ಬೆಂಗಾಲ್‌ ಪರ ನಿತಿನ್‌ ಕುಮಾರ್‌ (13 ಅಂಕ) ಏಕಾಂಗಿ ಹೋರಾಟ ನಡೆಸಿದರು.

ಪಂದ್ಯ ಮುಕ್ತಾಯಕ್ಕೆ 10 ನಿಮಿಷಗಳು ಬಾಕಿ ಇರುವಾಗ ಪುಣೇರಿ ಪಲ್ಟನ್‌ 38-18ರಲ್ಲಿಬೆಂಗಾಲ್‌ ಮೇಲೆ ಆಧಿಪತ್ಯ ಸಾಧಿಸಿತು. ಒತ್ತಡಕ್ಕೆ ಸಿಲುಕಿದ ಬೆಂಗಾಲ್‌ ಆಟಗಾರರು, ಯಾವುದೇ ಹಂತದಲ್ಲೂ ಪುಟಿದೇಳುವ ಸಾಹಸ ತೋರಲಿಲ್ಲ. ಇದನ್ನ ಅಸ್ತ್ರವಾಗಿಸಿಕೊಂಡ ಕಳೆದ ಬಾರಿಯ ಚಾಂಪಿಯನ್‌, 34 ನಿಮಿಷಕ್ಕೆ ಗೆಲುವಿನ ಅಂತರವನ್ನು 20ಕ್ಕೆ ಹಿಗ್ಗಿಸಿಕೊಂಡಿತು. ಇದರ ಬೆನ್ನಲ್ಲೇ ಬೆಂಗಾಲ್‌ ತಂಡವನ್ನು 4ನೇ ಬಾರಿ ಕಟ್ಟಿಹಾಕಿ 44-21ರಲ್ಲಿಅಂತರ ಕಾಯ್ದುಕೊಂಡು ಗೆಲುವನ್ನು ಖಚಿತಪಡಿಸಿಕೊಂಡಿತು.

ಮೊದಲಾರ್ಧದಲ್ಲಿ11 ಅಂಕಗಳ ಹಿನ್ನಡೆ ಅನುಭವಿಸಿದ ಬೆಂಗಾಲ್‌ ವಾರಿಯರ್ಸ್‌, ಪುಟಿದೇಳುವ ಇರಾದೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿತು. ಆತ್ತ ಮುನ್ನಡೆ ಕಾಯ್ದುಕೊಳ್ಳುವ ಗುರಿಯೊಂದಿಗೆ ಉತ್ತರಾರ್ಧ ಆಟವನ್ನು ಆರಂಭಿಸಿದ ಪುಣೇರಿ ಪಲ್ಟನ್‌, ಎದುರಾಳಿ ತಂಡದ ವಿರುದ್ಧ ರೇಡಿಂಗ್‌ ಮತ್ತು ಟ್ಯಾಕಲ್‌ ಎರಡರಲ್ಲೂಪ್ರಾಬಲ್ಯ ಕಾಯ್ದುಕೊಂಡಿತು. ಇದರ ಫಲವಾಗಿ 25ನೇ ನಿಮಿಷದಲ್ಲಿಮತ್ತೊಮ್ಮೆ ಬೆಂಗಾಲ್‌ ತಂಡವನ್ನು ಆಲೌಟ್‌ ಬಲೆಗೆ ಬೀಳಿದ ಪುಣೇರಿ ತನ್ನ ಮುನ್ನಡೆಯನ್ನು 15 ಅಂಕಗಳಿಗೆ ವಿಸ್ತರಿಸಿಕೊಂಡಿತು. ಈ ವೇಳೆ 8 ಅಂಕ ಗಳಿಸಿದ ಬೆಂಗಾಲ್‌ ತಂಡದ ನಿತಿನ್‌ ಲೀಗ್‌ನಲ್ಲಿ100 ರೇಡಿಂಗ್‌ ಪಾಯಿಂಟ್ಸ್‌ ಕಲೆಹಾಕಿದ ಗೌರವಕ್ಕೆ ಪಾತ್ರರಾದರು.

ರೇಡಿಂಗ್‌ ವಿಭಾಗದಲ್ಲಿಅಮೋಘ ಆಟದ ಜತೆಗೆ ಸಂಘಟಿತ ಹೋರಾಟ ಪ್ರದರ್ಶಿಸಿದ ಕಳೆದ ಬಾರಿಯ ಚಾಂಪಿಯನ್‌ ಪುಣೇರಿ ಪಲ್ಟನ್‌ ತಂಡ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ 24-11 ಅಂಕಗಳಿಂದ ಅಂತರ ಕಾಯ್ದುಕೊಳ್ಳುವ ಪ್ರಭುತ್ವ ಸಾಧಿಸಿತು.

7ನೇ ನಿಮಿಷದಲ್ಲಿವೈಭವ್‌ ಅವರನ್ನು ಔಟ್‌ ಮಾಡುವ ಪಂದ್ಯದಲ್ಲಿಮೊದಲ ಬಾರಿ ಆಲೌಟ್‌ ಪಾಯಿಂಟ್ಸ್‌ ಗಿಟ್ಟಿಸಿದ ಪುಣೇರಿ ಪಲ್ಟನ್‌, ಮೊದಲ 15 ನಿಮಿಷಗಳ ಆಟದ ಮುಕ್ತಾಯಕ್ಕೆ 15-10ರಲ್ಲಿಮೇಲುಗೈ ಸಾಧಿಸಿತು. ನಂತರವು ರೇಡಿಂಗ್‌ನಲ್ಲಿಅಬ್ಬರಿಸಿದ ಕೋಚ್‌. ಬಿ.ಸಿ. ರಮೇಶ್‌ ಗರಡಿಯಲ್ಲಿಪಳಗಿರುವ ಪುಣೇರಿ 18ನೇ ನಿಮಿಷದಲ್ಲಿಮತ್ತೆ ಬೆಂಗಾಲ್‌ ತಂಡವನ್ನು ಅಂಕಣದಿಂದ ಕಾಲಿ ಮಾಡಿತು. ಹಿನ್ನಡೆ ತಗ್ಗಿಸಲು ಮಾಜಿ ಚಾಂಪಿಯನ್‌ ಬೆಂಗಾಲ್‌ ಶತ ಪ್ರಯತ್ನ ನಡೆಸಿದರೂ ಯಾವುದೇ ಫಲ ದೊರೆಯಲಿಲ್ಲ. ಬೆಂಗಾಲ್‌ ಪರ ನಿತಿನ್‌ ಕುಮಾರ್‌ ಏಕಾಂಗಿ ಹೋರಾಟ ನಡೆಸಿದರೂ ಇತರರು ಸಾಥ್‌ ನೀಡಲು ವಿಫಲರಾಗಿದ್ದು, ಎದುರಾಳಿ ತಂಡಕ್ಕೆ ನೆರವಾಯಿತು. ಅತ್ತ ಆಕಾಶ್‌ ಶಿಂದೆ ಮತ್ತು ಮೋಹಿತ್‌ ಗೊಯೆಟ್‌ ಅವರ ಅಬ್ಬರಿಂದ ಮಿಂಚಿದ ಪುಣೇರಿ ಪಲ್ಟನ್‌ ಆಟಗಾರರು ಮೊದಲಾರ್ಧದಲ್ಲಿಗೆಲುವಿನ ಬೀಜ ಬಿತ್ತಿದರು.

ನವೆಂಬರ್‌ 25ರಂದು ಪುಣೇರಿ ಪಲ್ಟನ್‌ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ಯು ಮುಂಬಾ ಮತ್ತು ಬೆಂಗಳೂರು ಬುಲ್ಸ್‌ ತಂಡಗಳು ಪೈಪೋಟಿ ನಡೆಸಲಿವೆ.