ಕ್ರೀಡೆ

ಪುಣೆಯಲ್ಲಿ ಭಾರತ-ಬಾಂಗ್ಲಾ ಕಾದಾಟ; ಹೇಗಿದೆ ಪಿಚ್​? ಕಾಡುವುದೇ ಮಳೆ?

ಪುಣೆ: ಹ್ಯಾಟ್ರಿಕ್​ ಗೆಲುವಿನೊಂದಿಗೆ ಬೀಗುತ್ತಿರುವ ಆತಿಥೇಯ ಭಾರತ ತಂಡ ಏಕದಿನ ವಿಶ್ವಕಪ್​ನಲ್ಲಿ ತನ್ನ ಗೆಲುವಿನ ಓಟವನ್ನು ಸತತ 4ನೇ ಪಂದ್ಯಕ್ಕೂ ವಿಸ್ತರಿಸಲು ಸಜ್ಜಾಗಿದೆ. ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ರೋಹಿತ್​ ಶರ್ಮ ಬಳಗ, ಬಾಂಗ್ಲಾದೇಶದ ಸವಾಲು ಎದುರಿಸಲಿದ್ದು, ಬಲಿಷ್ಠ ನಿರ್ವಹಣೆಯನ್ನು ಮುಂದುವರಿಸುವ ಹಂಬಲದಲ್ಲಿದೆ. ಪಂದ್ಯದ ಪಿಚ್​ ಮತ್ತು ಹವಾಮಾನ ವರದಿಯ ವಿವರ ಇಲ್ಲಿದೆ.

ಬ್ಯಾಟಿಂಗ್​ ಸ್ನೇಹಿ ಪಿಚ್​

ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್​ನ 5 ಪಂದ್ಯಗಳ ಪೈಕಿ ಇದು ಮೊದಲನೆಯದು. ಹೀಗಾಗಿ ಪಿಚ್​ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಾಗಿದೆ. ಪಿಚ್​ ಬ್ಯಾಟಿಂಗ್​ ಸ್ನೇಹಿಯಾಗಿರುವ ನಿರೀಕ್ಷೆ ಇದೆ. ಆದರೆ ಬೌಲರ್​ಗಳೇ ನಿರ್ಣಾಯಕ ಪಾತ್ರ ನಿರ್ವಹಿಸಬೇಕಾಗಿದೆ. 2017ರಿಂದ ಇಲ್ಲಿ ನಡೆದಿರುವ 5 ಏಕದಿನಗಳಲ್ಲಿ 3ರಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ತಂಡ 300 ಪ್ಲಸ್​ ಮೊತ್ತ ಪೇರಿಸಿದೆ.

ಕಾಡುವುದೇ ಮಳೆ?

ಏಷ್ಯಾಕಪ್​-ಅಭ್ಯಾಸ ಪಂದ್ಯಗಳಿಗೆ ಮಳೆ ಅಡ್ಡಿ ಎದುರಿಸಿದ್ದ ಭಾರತ ವಿಶ್ವಕಪ್​ನಲ್ಲಿ ಮೊದಲ 3 ಪಂದ್ಯಗಳನ್ನು ನಿರ್ವಿಘ್ನವಾಗಿ ಆಡಿತ್ತು. ಆದರೆ ಪುಣೆಯಲ್ಲಿ ಮಳೆ ಕಾಡುವ ಭೀತಿ ಇದೆ. ಬುಧವಾರ ಸಂಜೆ ಇಲ್ಲಿ ಸುರಿದ ಮಳೆಯಿಂದಾಗಿ ಭಾರತ ತಂಡ ಅರ್ಧಗಂಟೆ ಬೇಗನೆ ಅಭ್ಯಾಸ ಮುಗಿಸಿದರೆ, ಬಾಂಗ್ಲಾದ ಅಭ್ಯಾಸಕ್ಕೆ ಅಡಚಣೆ ಎದುರಾಯಿತು. ಮೈದಾನವನ್ನೂ ಸಂಪೂರ್ಣವಾಗಿ ಕವರ್​ಗಳಿಂದ ಮುಚ್ಚಲಾಗಿತ್ತು. ಒಂದು ವೇಳೆ ಮಳೆ ಕಾಡಿದರೆ ಪಂದ್ಯಕ್ಕೆ ಮೀಸಲು ದಿನ ಇರುವುದಿಲ್ಲ. ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಳ್ಳಲಿವೆ.