ನವದೆಹಲಿ: ಕ್ರೀಡಾ ಜೆರ್ಸಿ, ಪಾದರಕ್ಷೆಗಳ ಉತ್ಪನ್ನ ಸಂಸ್ಥೆಗಳಾದ ಪೂಮಾ ಹಾಗೂ ಅಡಿಡಾಸ್ ಭಾರತ ಕ್ರಿಕೆಟ್ ತಂಡದ ಕಿಟ್ ಪ್ರಾಯೋಜಕತ್ವ ವಹಿಸಲು ಆಸಕ್ತಿ ತೋರಿವೆ. 2016ರಿಂದ 2020ರ ವರೆಗೆ ಕಿಟ್ ಪ್ರಾಯೋಜಕತ್ವ ವಹಿಸಿದ್ದ ನೈಕಿ ಕೂಡ ಅಂತಿಮ ಕ್ಷಣದಲ್ಲಿ ಬಿಡ್ ಸಲ್ಲಿಸುವ ಕೂಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಪೂಮಾ ಸಂಸ್ಥೆ ಬಿಡ್ ದಾಖಲೆಗಳನ್ನು ಖರೀದಿಸಿದೆ. ಅಡಿಡಾಸ್ ಕೂಡ ಈ ವಿಷಯದಲ್ಲಿ ಆಸಕ್ತಿ ತೋರುತ್ತಿದ್ದು, ಅದು ಸಂಪೂರ್ಣ ಕಿಟ್ನ ಪ್ರಾಯೋಜಕತ್ವ ವಹಿಸಿಕೊಳ್ಳುತ್ತದೋ ಅಥವಾ ಸಮವಸ್ತ್ರಕ್ಕೆ ಮಾತ್ರವೇ ಸೀಮಿತಗೊಳ್ಳುತ್ತದೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ.
‘ಪೂಮಾ ಸಂಸ್ಥೆ ಈಗಾಗಲೇ ಒಂದು ಲಕ್ಷ ರೂ. ಕೊಟ್ಟು ಐಟಿಟಿ (ಟೆಂಡರ್ ಆಹ್ವಾನ ಅರ್ಜಿ) ಖರೀದಿಸಿದೆ. ಹಾಗೆಂದ ಮಾತ್ರಕ್ಕೆ ಅದು ಬಿಡ್ ಸಲ್ಲಿಸುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೂ ಅದಕ್ಕೆ ಬಿಡ್ ಸಲ್ಲಿಸಲು ಆಸಕ್ತಿ ಇರುವುದಂತೂ ಸುಳ್ಳಲ್ಲ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜತೆಗೆ ಅಡಿಡಾಸ್ ಕೂಡ ಬಿಡ್ ಸಲ್ಲಿಸಲು ಆಸಕ್ತಿ ತೋರುತ್ತಿದೆ ಎಂದು ಹೇಳಾಗುತ್ತಿದೆ. ಯಾವುದೇ ಸಂಸ್ಥೆಗೆ ಕ್ರೀಡಾ ಸಮವಸ್ತ್ರಗಳನ್ನು ಮಾರಾಟ ಮಾಡಲು ಮಳಿಗೆಗಳ ಜಾಲ ಹೊಂದುವುದು ಅತ್ಯಂತ ಮುಖ್ಯವಾಗುತ್ತದೆ. ಹಾಗೆ ನೋಡಿದರೆ ಭಾರತದಲ್ಲಿ ಪೂಮಾ 350 ಮಾರಾಟ ಮಳಿಗೆಗಳನ್ನು ಹೊಂದಿದ್ದರೆ, ಅಡಿಡಾಸ್ 450 ಮಳಿಗೆಗಳನ್ನು ಹೊಂದಿದೆ. ಹೀಗಾಗಿ, ಕಿಟ್ ಪ್ರಾಯೋಜಕತ್ವಕ್ಕೆ ಉಭಯ ಸಂಸ್ಥೆಗಳ ನಡುವೆ ಪೈಪೊಟಿ ಏರ್ಪಡುವ ಸಾಧ್ಯತೆ ಇಲ್ಲದಿಲ್ಲ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಡ್ ಮೊತ್ತ ಕಡಿಮೆಯಾಗುವ ಸಾಧ್ಯತೆ: ಐದು ವರ್ಷಗಳ ಅವಧಿಗೆ ಕಿಟ್ ಪ್ರಾಯೋಜಕತ್ವದ ಗುತ್ತಿಗೆ ನೀಡಲಾಗುತ್ತಿದೆ. ಸದ್ಯ ಜಾಗತಿಕವಾಗಿ ಕೋವಿಡ್-19 ಪಿಡುಗು ಹಬ್ಬಿರುವ ಹಿನ್ನೆಲೆಯಲ್ಲಿ ಬಿಡ್ ಮೊತ್ತ 200 ಕೋಟಿ ರೂಪಾಯಿಗೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಮೊತ್ತ ಈ ಹಿಂದೆ ನೈಕಿ ಕೊಡುತ್ತಿದ್ದ 350 ಕೋಟಿ ರೂ.ಗೂ ಕಡಿಮೆಯಾಗಲಿದೆ ಹಿರಿಯ ಉದ್ಯಮಿಯೊಬ್ಬರು ತಿಳಿಸಿದ್ದಾರೆ. ಪ್ರಾಯೋಜಕತ್ವದಿಂದ ಹಿಂದೆ ಸರಿಯುವ ಮುನ್ನ ನೈಕಿ ಸಂಸ್ಥೆ 370 ಕೋಟಿ ರೂಪಾಯಿಗೆ (30 ಕೋಟಿ ರೂ. ರಾಯಲ್ಟಿ) ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಆದರೆ ಬಿಸಿಸಿಐ ಈ ಮೊತ್ತವನ್ನು ಕಡಿಮೆ ಮಾಡಿ, ಪ್ರಾಯೋಜಕತ್ವದಿಂದ ಹಿಂದೆ ಸರಿಯುವ ಪ್ರಸ್ತಾಪ ಸಲ್ಲಿಸಲು ನೈಕಿಗೆ ಅವಕಾಶ ಮಾಡಿಕೊಟ್ಟಿತ್ತು. ಹಾಗಾಗಿ ನೈಕಿ ಪ್ರಾಯೋಕತ್ವದಿಂದ ಹಿಂದೆ ಸರಿದಿತ್ತು. ಈ ಮೊತ್ತ ಮತ್ತಷ್ಟು ಕಡಿತಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನೈಕಿ ಪ್ರಾಯೋಜಕತ್ವದ ಪ್ರಸ್ತಾವನೆಯನ್ನು ತಿರಸ್ಕರಿಸಬಹುದು ಅಥವಾ ಬಿಡ್ ಸಲ್ಲಿಸಲು ಆಸಕ್ತಿ ತೋರದೇ ಇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪೂಮಾಗೆ ಇದ್ದಾರೆ ಪ್ರಚಾರ ರಾಯಭಾರಿ
ಪೂಮಾ ಸಂಸ್ಥೆಯ ಬಗ್ಗೆ ಹೇಳುವುದಾದರೆ ಐಪಿಎಲ್ ಮೂಲಕ ವೊದಲಿಂದಲೂ ಅದಕ್ಕೆ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳುವ ಹೆಬ್ಬಯಕೆ ಇತ್ತು. ಆದರೆ ಈಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರನ್ನು ತನ್ನ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಹಾಗಾಗಿ, ಟೀಮ್ ಇಂಡಿಯಾ ಮೂಲಕವಾದರೂ ಭಾರತದ ಮಾರುಕಟ್ಟೆಯಲ್ಲಿ ಬಲವಾಗಿ ನೆಲೆಯೂರಲು ಅದು ಪ್ರಯತ್ನಿಸುತ್ತಿದೆ.