ರಾಜ್ಕೋಟ್: ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ (243*ರನ್, 356 ಎಸೆತ, 30 ಬೌಂಡರಿ) ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 17ನೇ ದ್ವಿಶತಕ ಸಿಡಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಅವರು ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ಪರ ಈ ಮೈಲಿಗಲ್ಲು ನೆಟ್ಟಿದ್ದಾರೆ.
ಪೂಜಾರ ಈಗ ವಿಶ್ವದಲ್ಲಿ ಗರಿಷ್ಠ ದ್ವಿಶತಕ ಸಿಡಿಸಿದ ಬ್ಯಾಟರ್ಗಳಲ್ಲಿ ಇಂಗ್ಲೆಂಡ್ನ ಮಾರ್ಕ್ ರಾಮ್ಪ್ರಕಾಶ್ ಮತ್ತು ಹೆರ್ರ್ಬಟ್ ಸಟ್ಕ್ಲ್ಿ ಜತೆ ಜಂಟಿ 4ನೇ ಸ್ಥಾನ ಅಲಂಕರಿಸಿದ್ದಾರೆ. ಆಸ್ಟ್ರೆಲಿಯಾದ ಡಾನ್ ಬ್ರಾಡ್ಮನ್ ಗರಿಷ್ಠ 37 ದ್ವಿಶತಕ ಸಿಡಿಸಿದ ವಿಶ್ವದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್ನ ವಾಲಿ ಹ್ಯಾಮ್ಮಂಡ್ 36 ದ್ವಿಶತಕದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಎಲಿಯಾಸ್ ಹೆನ್ರಿ ಹೆಂಡ್ರೆನ್ (22) 3ನೇ ಸ್ಥಾನದಲ್ಲಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ನ 61ನೇ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿಕೊಂಡಿರುವ 35 ವರ್ಷದ ಪೂಜಾರ (19,812), ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಬಾರಿಸಿದ ಭಾರತೀಯ ಬ್ಯಾಟರ್ಗಳಲ್ಲಿ ವಿವಿಎಸ್ ಲಕ್ಷ್ಮಣ್ (19,730) ಅವರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದ್ದಾರೆ. ಸುನೀಲ್ ಗಾವಸ್ಕರ್ (25,834), ಸಚಿನ್ ತೆಂಡುಲ್ಕರ್ (25,396) ಮತ್ತು ರಾಹುಲ್ ದ್ರಾವಿಡ್ (23,794) ಅಗ್ರ 3 ಸ್ಥಾನದಲ್ಲಿರುವ ಭಾರತೀಯರಾಗಿದ್ದಾರೆ.
ಪೂಜಾರ ದ್ವಿಶತಕದಾಟದಿಂದ ಸೌರಾಷ್ಟ್ರ ತಂಡ 4 ವಿಕೆಟ್ಗೆ 578 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಪ್ರೇರಕ್ ಮಂಕಡ್ (104*) ಶತಕ ಸಿಡಿಸಿ ಪೂಜಾರಗೆ ಉತ್ತಮ ಬೆಂಬಲ ಒದಗಿಸಿದರು. 436 ರನ್ ಹಿನ್ನಡೆಯೊಂದಿಗೆ ದ್ವೀತಿಯ ಇನಿಂಗ್ಸ್ ಆರಂಭಿಸಿದ ಜಾರ್ಖಂಡ್ ದಿನದಂತ್ಯಕ್ಕೆ 2 ವಿಕೆಟ್ಗೆ 140 ರನ್ ಗಳಿಸಿದೆ.