ನವದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ದೇಶೀಯ ಕ್ರಿಕೆಟ್ ಋತುವಿನ ಪ್ರತಿಷ್ಠಿತ ರಣಜಿ ಟ್ರೋಫಿ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿ ನಡೆಯದಿರುವ ಸಾಧ್ಯತೆ ಎದುರಾಗಿದೆ. ಜನವರಿ 10ರಿಂದ 31ರವರೆಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯನ್ನು ಆಯೋಜಿಸುವುದಾಗಿ ಬಿಸಿಸಿಐ ಸಂಭಾವ್ಯ ವೇಳಾಪಟ್ಟಿ ಪ್ರಕಟಿಸಿದ ಬಳಿಕ ಈ ಅನುಮಾನ ಇನ್ನಷ್ಟು ಹೆಚ್ಚಾಗಿದೆ.
ಟಿ20 ಟೂರ್ನಿಯ ಲೀಗ್ ಹಂತ ಮುಕ್ತಾಯಗೊಂಡ ಬಳಿಕ ರಣಜಿ ಟ್ರೋಫಿ ಆಯೋಜಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಬಿಸಿಸಿಐ ತಿಳಿಸಿದೆ. ಆದರೆ ಟಿ20 ಟೂರ್ನಿ ಮುಗಿದ ಬಳಿಕ 2021ರ ಐಪಿಎಲ್‌ಗೆ ಮುನ್ನ 2 ತಿಂಗಳ ಸಮಯವಷ್ಟೇ ಬಾಕಿ ಉಳಿಯುತ್ತದೆ. ಹೀಗಾಗಿ ಈ ಕಿರು ಅವಧಿಯಲ್ಲಿ ರಣಜಿ ಟ್ರೋಫಿ ಟೂರ್ನಿ ಆಯೋಜನೆ ಅನುಮಾನವೆನಿಸಿದೆ.
ದೇಶೀಯ ಕ್ರಿಕೆಟ್ ಋತುವಿನ ಆರಂಭದ ಬಗ್ಗೆ ಬಿಸಿಸಿಐ ಕಳೆದ ತಿಂಗಳು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದ ಕೇಳಿದ್ದ ಅಭಿಪ್ರಾಯದಲ್ಲೂ, ಟಿ20 ಟೂರ್ನಿ ಆಯೋಜನೆಗೆ ಹೆಚ್ಚಿನ ಒಲವು ವ್ಯಕ್ತವಾಗಿತ್ತು. ಹೀಗಾಗಿ ಬಿಸಿಸಿಐ, ಈ ಬಾರಿ ರಣಜಿ ಟ್ರೋಫಿಗಿಂತ ಚುಟುಕು ಕ್ರಿಕೆಟ್ ಪ್ರಕಾರದ ಟೂರ್ನಿಗೆ ಮೊದಲ ಆದ್ಯತೆ ನೀಡಿದೆ.
ರೈತರ ಹೋರಾಟ, ಚಳಿಗಾಲ ಹಿನ್ನಡೆ!
ಬಿಸಿಸಿಐ ಡಿಸೆಂಬರ್‌ನಿಂದಲೇ ದೇಶೀಯ ಕ್ರಿಕೆಟ್ ಋತು ಆರಂಭಿಸುವ ಯೋಜನೆ ಹೊಂದಿದ್ದರೂ, ಉತ್ತರ ಭಾರತದಲ್ಲಿ ಸದ್ಯ ನಡೆಯುತ್ತಿರುವ ರೈತರ ಹೋರಾಟ ಮತ್ತು ಚಳಿಗಾಲ ಅಡ್ಡಿಯಾಗಿದೆ. ಈ ಹಿಂದೆಯೂ ಚಳಿಗಾಲದ ಸಮಯದಲ್ಲಿ ಕೆಲ ದೇಶೀಯ ಕ್ರಿಕೆಟ್ ಪಂದ್ಯಗಳು ಇಬ್ಬನಿ ಮತ್ತು ಮಂದಬೆಳಕಿನ ಸಮಸ್ಯೆಯಿಂದಾಗಿ ಅಡಚಣೆ ಎದುರಿಸಿದ್ದವು. ಅಲ್ಲದೆ ಕರೊನಾ ಭೀತಿಯಿಂದಾಗಿ ತರಾತುರಿಯಲ್ಲಿ ಟೂರ್ನಿ ಆಯೋಜಿಸಲು ಮುಂದಾಗುವುದು ಬೇಡ ಎಂಬ ಕಾರಣಕ್ಕಾಗಿ ಬಿಸಿಸಿಐ, ದೇಶೀಯ ಕ್ರಿಕೆಟ್ ಋತುವಿನ ಆರಂಭವನ್ನು ಜನವರಿವರೆಗೆ ಮುಂದೂಡಿದೆ. ಇದರಿಂದ ರಣಜಿ ಟ್ರೋಫಿ ಆಯೋಜನೆಗೆ ಸಮಯದ ಅಭಾವ ಎದುರಾಗುವಂತಾಗಿದೆ.