ಹೈದರಾಬಾದ್: ಕಳೆದ ಕೆಲ ತಿಂಗಳಿನಿಂದ ಟಿ20 ವಿಶ್ವಕಪ್, ಒಲಿಂಪಿಕ್ಸ್‌ನಂಥ ಜಾಗತಿಕ ಕ್ರೀಡಾಕೂಟದಲ್ಲಿ ಮುಳುಗಿದ್ದ ಕ್ರೀಡಾಭಿಮಾನಿಗಳಿಗೆ ಶುಕ್ರವಾರದಿಂದ ನಮ್ಮ ಮಣ್ಣಿನ ದೇಸಿ ಕ್ರೀಡೆಯ ರೋಮಾಂಚಕ ಕ್ಷಣಗಳನ್ನು ಆನಂದಿಸುವ ಸಮಯ ಆರಂಭವಾಗಲಿದೆ. ಯಶಸ್ವಿ 10 ವರ್ಷ ಪೂರೈಸಿರುವ ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತಿಗೆ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಚಾಲನೆ ದೊರೆಯಲಿದೆ. ಮೆಗಾ ಹರಾಜು ಪ್ರಕ್ರಿಯೆ ಬಳಿಕ ಯುವ ಹಾಗೂ ಅನುಭವಿ ಆಟಗಾರರಿಂದ ತಂಡಗಳನ್ನು ಸಜ್ಜುಗೊಳಿಸಿರುವ 12 ್ರಾಂಚೈಸಿಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಸೆಣಸಲಿದ್ದು, ಸ್ಟಾರ್ ರೈಡರ್‌ಗಳಾದ ಪವನ್ ಸೆಹ್ರಾವತ್ ಮತ್ತು ಪ್ರದೀಪ್ ನರ್ವಾಲ್ ನಡುವಿನ ಮುಖಾಮುಖಿಯೂ ಕುತೂಹಲ ಕೆರಳಿಸಿದೆ. ಕನ್ನಡಿಗ ಬಿಸಿ ರಮೇಶ್ ಮಾರ್ಗದರ್ಶನದಲ್ಲಿ ಪುಣೇರಿ ಪಲ್ಟಾನ್ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ.
ಸಚಿನ್ ಈ ಬಾರಿಯ ದುಬಾರಿ ಆಟಗಾರ: ಚೊಚ್ಚಲ ಪ್ರಶಸ್ತಿಯ ಹುಡುಕಾಟದಲ್ಲಿರುವ ತಮಿಳ್ ತಲೈವಾಸ್ ತಂಡ ರೈಡರ್ ಸಚಿನ್ ಅವರಿಗೆ 2.15 ಕೋಟಿ ರೂ. ನೀಡಿ ಖರೀದಿಸಿದ್ದು, ಹಾಲಿ ಆವೃತ್ತಿಯ ದುಬಾರಿ ಆಟಗಾರ ಎನಿಸಿದ್ದಾರೆ. ಆಗಸ್ಟ್‌ನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 8 ಆಟಗಾರರು ಕೋಟ್ಯಧಿಪತಿಗಳಾಗಿದ್ದು, ಇಬ್ಬರು 2 ಕೋಟಿ ರೂ.ಗೂ ಅಧಿಕ ಮೊತ್ತ ಪಡೆದುಕೊಂಡಿದ್ದಾರೆ. ಇರಾನ್‌ನ ಆಲ್ರೌಂಡರ್ ಮೊಹಮದ್ರೇಜಾ ಶೌಡ್ಲಾಯಿ ಚಿಯಾನೆಹ್ ₹2.7 ಕೋಟಿಗೆ ಹರಿಯಾಣ ಸ್ಟೀಲರ್ಸ್ ಸೇರಿ 2ನೇ ದುಬಾರಿ ಆಟಗಾರ ಆಗಿದ್ದಾರೆ. ಗುಜರಾತ್ ಜೈಂಟ್ಸ್‌ನ ಗುಮಾನ್ ಸಿಂಗ್ 1.97 ಕೋಟಿ ರೂ. ಪಡೆದು ಪಡೆದು ಮೂರನೇ ದುಬಾರಿ ಆಟಗಾರ ಎನಿಸಿ, ಪವನ್ ಸೆಹ್ರಾವತ್ (1.72) ಅವರನ್ನು ಹಿಂದಿಕ್ಕಿದ್ದಾರೆ. ಡುಬ್ಕಿ ಕಿಂಗ್ ಪ್ರದೀಪ್ ನರ್ವಾಲ್ ಅವರನ್ನು 70 ಲಕ್ಷ ರೂಪಾಯಿಗೆ ಖರೀದಿಸಿರುವ ಬೆಂಗಳೂರು ಬುಲ್ಸ್ ತಂಡ ಎರಡನೇ ಬಾರಿಗೆ ಪ್ರಶಸ್ತಿ ಜಯಿಸುವ ತವಕದಲ್ಲಿದೆ.
ಐವರು ಕನ್ನಡಿಗರು ಕಣಕ್ಕೆ
ಟೂರ್ನಿಯಲ್ಲಿ ಕರ್ನಾಟಕದ ಒಟ್ಟು5 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅವರೆಂದರೆ ಎಂ. ಚಂದ್ರನಾಯ್ಕ (ಬೆಂಗಳೂರು ಬುಲ್ಸ್), ಗಗನ್ (ಯುಪಿ), ವಿಶ್ವಾಸ್, ಸುಶೀಲ್ ಕಾಂಬ್ರೇಕರ್ (ಬೆಂಗಾಲ್), ಅಭಿಷೇಕ್ (ಜೈಪುರ).
ಮೂರು ಚರಣಗಳು
ಅ 18-ನ.9: ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಹೈದರಾಬಾದ್
ನ.10- ಡಿ.1: ನೋಯ್ಡ ಒಳಾಂಗಣ ಕ್ರೀಡಾಂಗಣ, ನೋಯ್ಡ.
ಡಿ.3-ಡಿ.24: ಬಾಳೆವಾಡಿ ಸ್ಪೋಟ್ಸ್ ಕಾಂಪ್ಲೆಕ್ಸ್, ಪುಣೆ.
ನಾಯಕರು: ಬೆಂಗಳೂರು ಬುಲ್ಸ್ -ಪ್ರದೀಪ್ ನರ್ವಾಲ್, ಪುಣೇರಿ ಪಲ್ಟಾನ್ -ಅಸ್ಲಾಂ ಇನಾಮ್‌ದಾರ್, ಪಾಟ್ನಾ ಪೈರೇಟ್ಸ್ - ಶುಭಂ ಶಿಂಧೆ, ತೆಲುಗು ಟೈಟಾನ್ಸ್-ಪವನ್ ಸೆಹ್ರಾವತ್, ಯುಪಿ ಯೋಧಾಸ್ - ಸುರೀಂದರ್ ಗಿಲ್, ಯು ಮುಂಬಾ - ಸುನೀಲ್ ಕುಮಾರ್,
ತಮಿಲ್ ತಲೈವಾಸ್ -ಸಾಗರ್, ಜೈಪುರ್ ಪಿಂಕ್ ಪ್ಯಾಂಥರ್ಸ್ -ಅರ್ಜುನ್ ದೇಶ್ವಾಲ್, ಹರಿಯಾಣ ಸ್ಟೀಲರ್ಸ್ -ಜೈದೀಪ್ ದಹಿಯಾ
ಗುಜರಾತ್ ಜೈಂಟ್ಸ್ -ನೀರಜ್ ಕುಮಾರ್, ದಬಾಂಗ್ ಡೆಲ್ಲಿ - ನವೀನ್ ಕುಮಾರ್, ಬೆಂಗಾಲ್ ವಾರಿಯರ್ಸ್ -ಜಲ್ ಅತ್ರಾಚಲಿ