ಕ್ರೀಡೆ

Pro Kabaddi League: ಬೆಂಗಳೂರು ಬುಲ್ಸ್​ ಸೋಲಿನ ಆರಂಭ

ಹೈದರಾಬಾದ್​: ಮಾಜಿ ಚಾಂಪಿಯನ್​ ಬೆಂಗಳೂರು ಬುಲ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ 11ನೇ ಆವೃತ್ತಿಯಲ್ಲಿ ಸೋಲಿನ ಆರಂಭ ಕಂಡಿದೆ. ಶುಕ್ರವಾರ ಆರಂಭಗೊಂಡ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ತಂಡ 29-37 ಅಂಕಗಳಿಂದ ತೆಲುಗು ಟೈಟಾನ್ಸ್​ ಎದುರು ನಿರಾಸೆ ಅನುಭವಿಸಿತು.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಟಾರ್​ ರೈಡರ್​ಗಳಾದ ಪ್ರದಿಪ್​ ನರ್ವಾಲ್​ ಹಾಗೂ ಪವನ್​ ಸೆಹ್ರಾವತ್​ ಸಾರಥ್ಯದ ತಂಡಗಳ ನಡುವಿನ ಕಾದಾಟದ ಆರಂಭದಲ್ಲಿ ಸಮಬಲದ ಹೋರಾಟ ನಡೆಯಿತು. 10 ನಿಮಿಷಗಳ ಬಳಿಕ ಆಲೌಟ್​ ಬಲೆಗೆ ಸಿಲುಕಿದ ಬುಲ್ಸ್​ ಹಿನ್ನಡೆ ಎದುರಿಸಿತು. ಮೊದಲಾರ್ಧದಲ್ಲಿ ತೆಲುಗು ಟೈಟಾನ್ಸ್​ ತಂಡ 20-11 ರಿಂದ ಮೇಲುಗೈ ಸಾಧಿಸಿತು. ದ್ವೀತಿಯಾರ್ಧದಲ್ಲಿ ತೆಲುಗು ಟೈಟಾನ್ಸ್​ ತಂಡವನ್ನು ಆಲೌಟ್​ ಮಾಡಿ ಹಿನ್ನಡೆ ತಗ್ಗಿಸಿಕೊಂಡ ಬುಲ್ಸ್​, ನಂತರ ಲಯ ತಪ್ಪಿತು. ಪವನ್​ ಸೆಹ್ರಾವತ್​ 13 ಅಂಕಗಳಿಸಿ ಮಿಂಚಿದರೆ, ಬುಲ್ಸ್​ ಪರ ಡಿಫೆಂಡರ್​ ಸುರೀಂದರ್​ 5 ಅಂಕ ಕಲೆಹಾಕಿದ್ದು ಗರಿಷ್ಠ ಎನಿಸಿತು. ಬುಲ್ಸ್​ ನಾಯಕ ಪ್ರದೀಪ್​​ ನರ್ವಾಲ್​ 3 ಅಂಕಕ್ಕೆ ಸಮಾಧಾನ ಕಂಡರು.

ದಿನದ 2ನೇ ಪಂದ್ಯದಲ್ಲಿ ದಬಂಗ್​ ಡೆಲ್ಲಿ ತಂಡ 36-28ರಿಂದ ಯು ಮುಂಬಾ ವಿರುದ್ಧ ಜಯ ದಾಖಲಿಸಿತು.

ಇಂದಿನ ಪಂದ್ಯಗಳು

ತೆಲುಗು ಟೈಟಾನ್ಸ್​-ತಮಿಳ್​ ತಲೈವಾಸ್​

ಪುಣೇರಿ ಪಲ್ಟಾನ್​&ಹರಿಯಾಣ ಸ್ಟೀಲರ್ಸ್​

ಆರಂಭ: ರಾತ್ರಿ 8

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್