ಬೆಂಗಳೂರು: ನಾಯಕ ಪವನ್ ಶೆರಾವತ್ (18) ಅಮೋಘ ನಿರ್ವಹಣೆಯ ಬಲದಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯಲ್ಲಿ ಸತತ 6ನೇ ಪಂದ್ಯದಲ್ಲೂ ಅಜೇಯ ಓಟ ಮುಂದುವರಿಸಿದೆ. ಗುರುವಾರ ನಡೆದ ಮಾಜಿ ಚಾಂಪಿಯನ್‌ಗಳ ಮುಖಾಮುಖಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಜೈಪುರ ಪಿಂಕ್‌ಪ್ಯಾಂಥರ್ಸ್ ತಂಡವನ್ನು 38-31ರಿಂದ ಪರಾಭವಗೊಳಿಸಿತು. ಈ ಮೂಲಕ ಬೆಂಗಳೂರು ತಂಡ (28) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದೆ.
ಆರಂಭಿಕ ಪಂದ್ಯದಲ್ಲಿ ಸೋಲು ಕಂಡ ಬಳಿಕ ಬುಲ್ಸ್ ಅಜೇಯವಾಗಿ ಮುನ್ನಡೆದಿದ್ದು, ಕಳೆದ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 1 ಟೈ ಸಾಧಿಸಿದೆ. ಮೊದಲಾರ್ಧದಲ್ಲೇ 20-14ರಿಂದ ಮುನ್ನಡೆ ಸಾಧಿಸಿ ಬೀಗಿದ್ದ ಬುಲ್ಸ್ ತಂಡ ದ್ವಿತೀಯಾರ್ಧದಲ್ಲೂ ಪಟ್ಟು ಸಡಿಲಿಸಲಿಲ್ಲ.
ಪಟನಾ-ತಲೈವಾಸ್ ಟೈ: 3 ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ಮತ್ತು ತಮಿಳ್ ತಲೈವಾಸ್ ನಡುವಿನ ದಿನದ ಮೊದಲ ಪಂದ್ಯ 30-30ರಿಂದ ಟೈಗೊಂಡಿತು. ಕನ್ನಡಿಗ ಪ್ರಶಾಂತ್ ಕುಮಾರ್ ರೈ ಸಾರಥ್ಯದ ಪಟನಾ ತಂಡ ಮೊದಲಾರ್ಧದಲ್ಲಿ 18-12ರಿಂದ ಮುನ್ನಡೆಯಲ್ಲಿತ್ತು.