ಕ್ರೀಡೆ

ಪ್ರೊ ಕಬಡ್ಡಿ 10ನೇ ಆವೃತ್ತಿ 12 ತಂಡಗಳ ನಾಯಕರು ಯಾರು ?: ಕಣದಲ್ಲಿದ್ದಾರೆ ಏಳು ಕನ್ನಡಿಗರು, ಪವನ್ ಶೆರಾವತ್‌ ದುಬಾರಿ

ಅಹಮದಾಬಾದ್: ಕಳೆದ ಒಂದೂವರೆ ತಿಂಗಳಿನಿಂದ ಏಕದಿನ ವಿಶ್ವಕಪ್ ಹಬ್ಬದಲ್ಲಿ ತಲ್ಲೀನರಾಗಿದ್ದ ಕ್ರೀಡಾಭಿಮಾನಿಗಳಿಗೆ ಶನಿವಾರದಿಂದ ದೇಸಿ ಕ್ರೀಡೆಯ ಸೊಬಗನ್ನು ಸವಿಯುವ ಅವಕಾಶ ಒಲಿದಿದೆ. ವರ್ಷದಿಂದ ವರ್ಷಕ್ಕೆ ರೋಚಕ ಅನುಭವ ನೀಡುತ್ತಿರುವ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಗೆ ಅಹಮದಾಬಾದ್‌ನಲ್ಲಿ ಚಾಲನೆ ಸಿಗಲಿದೆ. ಮುಂದಿನ ಮೂರು ತಿಂಗಳ ಕಾಲ ನಡೆಯಲಿರುವ ಈ ಲೀಗ್ ಭರ್ಜರಿ ಮನರಂಜನೆ ನೀಡುವ ಜತೆಗೆ ಸಾಕಷ್ಟು ಕುತೂಹಲ ಮೂಡಿಸಲಿದೆ.

ಕಣದಲ್ಲಿ 7 ಕನ್ನಡಿಗರು: ಟೂರ್ನಿಯಲ್ಲಿ ಒಟ್ಟು 7 ಕನ್ನಡಿಗರು ಕಣಕ್ಕಿಳಿಯಲಿದ್ದಾರೆ. ಅವರೆಂದರೆ ಪ್ರಪಂಚನ್ (ಹರಿಯಾಣ), ರಕ್ಷಿತ್ (ಬೆಂಗಳೂರು ಬುಲ್ಸ್), ಅಭಿಷೇಕ್ (ಜೈಪುರ), ರಂಜಿತ್ (ಪಟನಾ), ವಿಶ್ವ (ಬೆಂಗಾಲ್), ಶಶಾಂಕ್ (ಜೈಪುರ), ಗಗನ್ (ಯುಪಿ).

ಪವನ್ ದುಬಾರಿ ಆಟಗಾರ: 2018ರ 6ನೇ ಆವೃತ್ತಿಯ ಪ್ರೊ ಕಬಡ್ಡಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪವನ್ ಕುಮಾರ್ ಶೆರಾವತ್ (ತಮಿಳ್ ತಲೈವಾಸ್) ಕಳೆದ ಆವೃತ್ತಿಯಲ್ಲಿ ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಲ್ಲಿ ಹೊರಬಿದ್ದರೂ, ಈ ಬಾರಿಯ ಮೆಗಾ ಹರಾಜಿನಲ್ಲಿ ದಾಖಲೆಯ 2.61 ಕೋಟಿ ರೂಪಾಯಿ ನೀಡಿ ತೆಲುಗು ಟೈಟಾನ್ಸ್ ತಂಡ ಖರೀದಿಸಿದೆ. ಇರಾನ್ ಆಲ್ರೌಂಡರ್ ಮೊಹಮ್ಮದ್ರೇಜಾ ಶಾಡ್ಲೌಯಿ ಚಿಯಾನೆಹ್ ಟೂರ್ನಿಯ ಎರಡನೇ ದುಬಾರಿ ಆಟಗಾರ ಎನಿಸಿದ್ದು ಪುಣೇರಿ ಪಲ್ಟನ್ ತಂಡ 2.35 ಕೋಟಿ ರೂ. ನೀಡಿ ಖರೀದಿಸಿದೆ. ಬೆಂಗಾಲ್ ವಾರಿಯರ್ಸ್‌ನ ಮಣೀಂದರ್ ಸಿಂಗ್ 2.12 ಕೋಟಿ ರೂ. ಪಡೆದು ಮೂರನೇ ದುಬಾರಿ ಆಟಗಾರ ಎನಿಸಿದ್ದಾರೆ.