ಏಷ್ಯಾಡ್​ ಪದಕ ವಿಜೇತರನ್ನು ಸಿಎಂ ಸನ್ಮಾನಿಸಿದ ಕ್ಷಣ. ಏಜೆನ್ಸಿ
ಕ್ರೀಡೆ

ಏಷ್ಯಾಡ್​ ಪದಕ ವಿಜೇತರಿಗೆ ಬಹುಮಾನ ಮೊತ್ತ ಹೆಚ್ಚಳ: ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಕೆಒಎ ಅಧ್ಯಕ್ಷ ಡಾ.ಕೆ. ಗೋವಿಂದರಾಜ್‌

ಬಹುಮಾನ ಮೊತ್ತ ಹೆಚ್ಚಳದಿಂದ ರಾಜ್ಯದ ಕ್ರೀಡಾಪಟುಗಳಿಗೆ ಉತ್ತೇಜನದ ಜೊತೆಗೆ ಜವಾಬ್ದಾರಿಯೂ ಹೆಚ್ಚಿದೆ

ಬೆಂಗಳೂರು: ಕರ್ನಾಟಕದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಏಷ್ಯಾಡ್‌ ಪದಕ ವಿಜೇತರಿಗೆ ನಗದು ಪುರಸ್ಕಾರವನ್ನು ಹೆಚ್ಚಿಸಿದ ರಾಜ್ಯದ ಸರ್ಕಾರದ ತೀರ್ಮಾನವನ್ನು ಫಿಬಾ ಅಧ್ಯಕ್ಷರು, ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಡಾ.ಕೆ.ಗೋವಿಂದರಾಜ್‌ ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರೂ ಆದ ಡಾ.ಜಿ. ಪರಮೇಶ್ವರ ಅವರು ಮಹತ್ವದ ತೀರ್ಮಾನಕೈಗೊಂಡಿದ್ದು, ಕರ್ನಾಟಕದ ಕ್ರೀಡಾಪಟುಗಳ ಪರವಾಗಿ ಹಾಗೂ ಕೆಒಎ ಪರವಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.

'ಈ ಹಿಂದೆ ಚಿನ್ನದ ಪದಕ ವಿಜೇತರಿಗೆ 35 ಲಕ್ಷ, ಬೆಳ್ಳಿ ಪದಕ ವಿಜೇತರಿಗೆ 25 ಲಕ್ಷ ಹಾಗೂ ಕಂಚಿನ ಪದಕ ವಿಜೇತರಿಗೆ 15 ಲಕ್ಷ ನಗದು ಪುರಸ್ಕಾರ ನೀಡಲಾಗುತ್ತಿತ್ತು. ಪರಿಷ್ಕೃತ ಮೊತ್ತದ ಪ್ರಕಾರ, ಚಿನ್ನದ ಪದಕ ವಿಜೇತರಿಗೆ 1 ಕೋಟಿ, ಬೆಳ್ಳಿ ಪದಕ ವಿಜೇತರಿಗೆ 75 ಲಕ್ಷ ಮತ್ತು ಕಂಚಿನ ಪದಕ ಗೆದ್ದರೆ 50 ಲಕ್ಷ ರೂಪಾಯಿ ಮೊತ್ತವನ್ನು ಘೋಷಿಸಲಾಗಿದೆ. ರಾಜ್ಯ ಸರ್ಕಾರದ ತೀರ್ಮಾನದಿಂದ ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ' ಎಂದು ಹೇಳಿದ್ದಾರೆ.

ಡಾ.ಕೆ. ಗೋವಿಂದರಾಜ್​

ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಜೊತೆಗೆ ಜವಾಬ್ದಾರಿಯೂ ಹೆಚ್ಚಿದೆ

'ಸರ್ಕಾರ ಬಹುಮಾನ ಮೊತ್ತವನ್ನು ಪರಿಷ್ಕರಿಸಿರುವುದು ಸಂತಸದ ವಿಚಾರ. ಇದು ಕ್ರೀಡಾಪಟುಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಅವರ ಜವಾಬ್ದಾರಿಯನ್ನು ಹೆಚ್ಚಿಸಿದಂತಾಗಿದೆ. ಮುಂಬರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳ ರಾಜ್ಯದ ಕ್ರೀಡಾಪಟುಗಳು ಹೆಚ್ಚಿನ ಪದಕ ಜಯಿಸುವಂತಾಗಲಿ ಎಂಬುದೇ ನನ್ನ ಆಶಯ ಎಂದು ಡಾ.ಕೆ. ಗೋವಿಂದರಾಜ್‌ ತಿಳಿಸಿದ್ದಾರೆ.

'ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ 20 ಕ್ರೀಡಾಪಟುಗಳಿಗೆ ತಲಾ 5 ಲಕ್ಷ ನಗದು ಪ್ರೋತ್ಸಾಹಧನ ನೀಡಲಾಗಿದೆ. ಜೊತೆಗೆ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ರಾಜ್ಯ ಸರ್ಕಾರ ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ ಬೆಳವಣಿಗೆ' ಎಂದು ಹೇಳಿದ್ದಾರೆ.