ಕ್ರೀಡೆ

ಸೊನ್ನೆಗೆ ಔಟಾಗಿ ಹೋಗಿ ಊಟಕ್ಕೆ ಕುಳಿತ ಪೃಥ್ವಿ ಷಾ! ಭಾರಿ ಟ್ರೋಲ್

ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಬ್ಯಾಟ್ಸ್‌ಮನ್ ಪೃಥ್ವಿ ಷಾ ಐಪಿಎಲ್-13ರಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದರು. ಅದರ ಬೆನ್ನಲ್ಲೇ ಡ್ರೆಸ್ಸಿಂಗ್ ರೂಂನಲ್ಲಿ ಅವರು ಭರ್ಜರಿ ಭೋಜನ ಮಾಡುತ್ತಿರುವುದು ಪಂದ್ಯದ ನೇರಪ್ರಸಾರದ ವೇಳೆ ಕಂಡುಬಂದಿತ್ತು. ಇದರಿಂದಾಗಿ ಕ್ರಿಕೆಟ್ ಪ್ರೇಮಿಗಳು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಮಾಡಿದ್ದಾರೆ.

19 ವಯೋಮಿತಿ ಭಾರತ ತಂಡದ ನಾಯಕರಾಗಿ ವಿಶ್ವಕಪ್ ಗೆಲುವು ಕಂಡಿದ್ದ ಪೃಥ್ವಿ ಷಾ, ಟೆಸ್ಟ್ ಕ್ರಿಕೆಟ್‌ನಲ್ಲೂ ಶತಕ ಸಿಡಿಸುವ ಮೂಲಕ ಭಾರತ ತಂಡಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದರು. ಆದರೆ ಮುಂಬೈ ಬ್ಯಾಟ್ಸ್‌ಮನ್ ಈಗ ಐಪಿಎಲ್‌ನಲ್ಲಿ ಅಸ್ಥಿರ ನಿರ್ವಹಣೆ ತೋರುತ್ತಿದ್ದಾರೆ. ಈ ನಡುವೆ ಎರಡೇ ಎಸೆತಕ್ಕೆ ಸೊನ್ನೆ ಸುತ್ತಿದರೂ, ಕೆಲವೇ ನಿಮಿಷಗಳಲ್ಲಿ ಊಟದ ತಟ್ಟೆಯೊಂದಿಗೆ ಅವರು ಕಾಣಿಸಿರುವುದು ನೆಟ್ಟಿಗರ ಕಣ್ಣು ಕುಕ್ಕಿದೆ.

ಮೈದಾನದಲ್ಲಿ ‘ಡಕ್’ ತಿಂದರೂ ಪೃಥ್ವಿ ಷಾ ಹೊಟ್ಟೆ ತುಂಬಲಿಲ್ಲ ಎಂದು ಕೆಲವರು ಕಾಲೆಳೆದಿದ್ದಾರೆ. ಹೊಟ್ಟೆ ಹಸಿವಾಗುತ್ತಿದ್ದ ಕಾರಣದಿಂದಲೇ ಪೃಥ್ವಿ ಷಾ ಬೇಗನೆ ಔಟಾಗಿ ಊಟಕ್ಕೆ ಹೋಗಿರಬಹುದು ಎಂದೂ ಕೆಲವರು ಕುಟುಕಿದ್ದಾರೆ.