ಕ್ರೀಡೆ

ರೈಲ್ವೇಸ್​ಗೆ ಪ್ರತೀಕ್, ಮಿಥುನ್ ಕಡಿವಾಣ; ಕರ್ನಾಟಕಕ್ಕೆ ಆರಂಭಿಕ ಮೇಲುಗೈ

lakshmihegde

ನವದೆಹಲಿ: ವೇಗಿಗಳಾದ ಪ್ರತೀಕ್ ಜೈನ್ (14ಕ್ಕೆ 4) ಹಾಗೂ ಅಭಿಮನ್ಯು ಮಿಥುನ್ (18ಕ್ಕೆ 2) ಜೋಡಿಯ ಮಾರಕ ದಾಳಿ ನೆರವಿನಿಂದ ಪ್ರವಾಸಿ ಕರ್ನಾಟಕ ತಂಡ ರಣಜಿ ಟ್ರೋಫಿ 7ನೇ ಸುತ್ತಿನ ಪಂದ್ಯದಲ್ಲಿ ರೈಲ್ವೇಸ್ ತಂಡಕ್ಕೆ ಕಡಿವಾಣ ಹಾಕಿದೆ. ರಾಷ್ಟ್ರ ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಬಿದ್ದ ಜಿಟಿಜಿಟಿ ಮಳೆ ಹಾಗೂ ಮಂಜಿನಿಂದ ದಿನದ ಮೊದಲ ಅವಧಿಯ ಆಟ ನಡೆಯಲಿಲ್ಲ.

ಕಾರ್ನೆಲ್ ಸಿಂಗ್ ಸ್ಟೇಡಿಯಂನಲ್ಲಿ ಸೋಮವಾರ ಆರಂಭಗೊಂಡ ಪಂದ್ಯದಲ್ಲಿ ರಾಜ್ಯದ ವೇಗಿಗಳ ದಾಳಿಗೆ ನಲುಗಿದ ರೈಲ್ವೇಸ್ ತಂಡ ಮೊದಲ ದಿನದಂತ್ಯಕ್ಕೆ 6 ವಿಕೆಟ್​ಗೆ 98 ರನ್​ಗಳಿಸಿದ್ದು, ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ.

ಟಾಸ್ ಜಯಿಸಿದ ನಾಯಕ ಕರುಣ್ ನಾಯರ್ ಎದುರಾಳಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ರೈಲ್ವೇಸ್ ತಂಡಕ್ಕೆ 3ನೇ ಓವರ್​ನಲ್ಲೇ ಶಾಕ್ ನೀಡುವ ಮೂಲಕ ರಾಜ್ಯದ ಅನುಭವಿ ವೇಗಿ ಮಿಥುನ್, ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು. ಆರಂಭಿಕ ಆಶಿಶ್ ಶೆರಾವತ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಕೀಪರ್ ಶರತ್​ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಮಿಥುನ್ ರೈಲ್ವೇಸ್ ತಂಡದ ಕುಸಿತಕ್ಕೆ ಮುನ್ನುಡಿ ಬರೆದರು.

ಹಳಿಗೇರದ ರೈಲ್ವೇಸ್ ಬ್ಯಾಟಿಂಗ್: ಮಿಥುನ್ ಆರಂಭಿಕ ಆಘಾತ ನೀಡಿದರೆ, ಪ್ರತೀಕ್ ಜೈನ್ ರೈಲ್ವೇಸ್ ಬ್ಯಾಟ್ಸ್​ಮನ್​ಗಳ ಪೆವಿಲಿಯನ್ ಪರೇಡ್​ಗೆ ಕಾರಣರಾದರು. ಕೇವಲ 45 ರನ್​ಗಳಲ್ಲಿ 6 ವಿಕೆಟ್ ಕಳೆದುಕೊಂಡ ರೈಲ್ವೇಸ್ ಆಘಾತ ಎದುರಿಸಿತು. ಈ ವೇಳೆ ಜತೆಯಾದ ನಾಯಕ ಅರಿಂಧಮ್ ಘೋಷ್ (32*ರನ್, 88 ಎಸೆತ, 4 ಬೌಂಡರಿ) ಹಾಗೂ ಅವಿನಾಶ್ ಯಾದವ್ (29*ರನ್, 92 ಎಸೆತ, 5 ಬೌಂಡರಿ) ಜೋಡಿ ಮಂದಗತಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿತು. ಈ ಜೋಡಿ 7ನೇ ವಿಕೆಟ್​ಗೆ 53 ರನ್ ಜತೆಯಾಟವಾಡಿ 2ನೇ ದಿನದಾಟಕ್ಕೆ ಇನಿಂಗ್ಸ್ ಕಾಯ್ದುಕೊಂಡಿತು. 4ನೇ ರಣಜಿ ಪಂದ್ಯವಾಡುತ್ತಿರುವ ಪ್ರತೀಕ್ ಜೈನ್ ಬಿಗಿ ಬೌಲಿಂಗ್ ದಾಳಿಯಿಂದ ಗಮನಸೆಳೆದರು.

ರಾಜ್ಯ ತಂಡದಲ್ಲಿ 4 ಬದಲಾವಣೆ

ಕರ್ನಾಟಕ ತಂಡ 4 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧದ ಗೆಲುವಿನ ರೂವಾರಿ ಆಲ್ರೌಂಡರ್ ಕೆ.ಗೌತಮ್ ನಾಯಕ ಕರುಣ್ ನಾಯರ್, ವೇಗಿ ಮಿಥುನ್ ತಂಡಕ್ಕೆ ವಾಪಸಾದರೆ, ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ಬಿಆರ್ ಶರತ್ ಬದಲಿಗೆ ಕಣಕ್ಕಿಳಿದರು. ಪ್ರಸಕ್ತ ಆವೃತ್ತಿಯಲ್ಲಿ ಶರತ್ ಶ್ರೀನಿವಾಸ್​ಗೆ ಇದು ಮೊದಲ ಪಂದ್ಯವಾಗಿದೆ. ಜೆ.ಸುಚಿತ್, ಶರತ್ ಬಿಆರ್, ಪವನ್, ಪ್ರವೀಣ್ ದುಬೆ ಹೊರಗುಳಿದರು. ಕೆ. ಗೌತಮ್ ಲಭ್ಯತೆಯಿಂದಾಗಿ ಸುಚಿತ್ 15ರ ಬಳಗದಲ್ಲೂ ಸ್ಥಾನ ಪಡೆದಿರಲಿಲ್ಲ.

ವಿನಯ್​​ಕುಮಾರ್ 500 ವಿಕೆಟ್ ಒಡೆಯ

ಕರ್ನಾಟಕ ತಂಡದ ಮಾಜಿ ನಾಯಕ ಹಾಗೂ ಪುದುಚೇರಿ ತಂಡದ ವಿನಯ್ ಕುಮಾರ್ (32ಕ್ಕೆ 6) ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 500 ವಿಕೆಟ್ ಪಡೆದ ಸಾಧನೆ ಮಾಡಿದರು. ಚಂಢೀಗಡ ಎದುರು 6 ವಿಕೆಟ್ ಗೊಂಚಲು ಪಡೆದ ವಿನಯ್, ಇದುವರೆಗೂ 137 ಪಂದ್ಯಗಳಿಂದ 502 ವಿಕೆಟ್ ಕಬಳಿಸಿದಂತಾಗಿದೆ. ಸತತ 3ನೇ ಇನಿಂಗ್ಸ್​ನಲ್ಲಿ ಅವರು 5 ವಿಕೆಟ್ ಗೊಂಚಲು ಪಡೆದರು.

ಗೋವಾ ತಂಡ ಉತ್ತಮ ಆರಂಭ: ಗೋವಾ ತಂಡದ ಆರಂಭಿಕರಾದ ಸುಮ್ರಿನ್ ಅಮೊಂಕರ್ (160) ಹಾಗೂ ವೈಭವ್ ಗೊಂವೆಕರ್ (160) ಜೋಡಿ ಭರ್ಜರಿ ಶತಕ ಸಿಡಿಸಿತು. ನಾಗಾಲ್ಯಾಂಡ್ ತಂಡದ ಸೆಡೆಜಾಲೀ ರೂಪೆರೊ (105*) ಹಾಗೂ ಛತ್ತೀಸ್​ಗಢ ತಂಡದ ಹರ್​ಪ್ರೀತ್ ಸಿಂಗ್ (116) ಶತಕ ಸಿಡಿಸಿದರು. ಮಹಾರಾಷ್ಟ್ರ ತಂಡದ ಮನೋಜ್ ಇಂಗಾಲೆ (34ಕ್ಕೆ 6), ಸೌರಾಷ್ಟ್ರ ತಂಡದ ಜೈದೇವ್ ಉನಾದ್ಕತ್ (34ಕ್ಕೆ 6) 5 ವಿಕೆಟ್ ಗೊಂಚಲು ಪಡೆದರು.

ಸರ್ಫ್ರಾಜ್ ಖಾನ್ ಅಜೇಯ ದ್ವಿಶತಕ ಸಾಧನೆ

ಹಿಂದಿನ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ತ್ರಿಶತಕ ಸಿಡಿಸಿದ ಸಂಭ್ರಮಿಸಿದ್ದ ಮುಂಬೈ ತಂಡದ ಯುವ ಬ್ಯಾಟ್ಸ್​ಮನ್ ಸಫ್ರಾಜ್ ಖಾನ್ (226*ರನ್, 213 ಎಸೆತ, 32 ಬೌಂಡರಿ, 4 ಸಿಕ್ಸರ್) ದ್ವಿಶತಕ ಸಿಡಿಸಿ ಸಂಭ್ರಮಿಸಿದರು. ಸರ್ಫ್ರಾಜ್ ಖಾನ್ ಅಜೇಯ ದ್ವಿಶತಕದ ನೆರವಿನಿಂದ ಮುಂಬೈ ಹಿಮಾಚಲ ಪ್ರದೇಶ ವಿರುದ್ಧ ಆರಂಭಿಕ ವೈಫಲ್ಯದ ನಡುವೆಯೂ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್​ಗೆ 372 ರನ್ ಗಳಿಸಿದೆ. ಪಾರ್ಥಿವ್ ಪಟೇಲ್ ಗುಜರಾತ್ ಪರ 100 ರಣಜಿ ಪಂದ್ಯವಾಡಿದ ಮೊದಲ ಆಟಗಾರ ಎನಿಸಿದರು.

ರೈಲ್ವೇಸ್ ಪ್ರಥಮ ಇನಿಂಗ್ಸ್:49 ಓವರ್​ಗಳಲ್ಲಿ 6 ವಿಕೆಟ್​ಗೆ 98ಮೃಣಾಲ್ ದೇವಧರ್ ಎಲ್​ಬಿಡಬ್ಲ್ಯು ಬಿ ಪ್ರತೀಕ್ 12ಶೆರಾವತ್ ಸಿ ಶರತ್ ಬಿ ಮಿಥುನ್ 0ಸೌರಭ್ ಸಿಂಗ್ ಬಿ ಪ್ರತೀಕ್ ಜೈನ್ 7ಅರಿಂದಮ್ ಘೋಷ್ ಬ್ಯಾಟಿಂಗ್ 32ಮಹೇಶ್ ರಾವತ್ ಬಿ ಪ್ರತೀಕ್ ಜೈನ್ 0ದಿನೇಶ್ ಮೋರ್ ಬಿ ಪ್ರತೀಕ್ ಜೈನ್ 4ಹರ್ಷ ತ್ಯಾಗಿ ಸಿ ಶರತ್ ಬಿ ಮಿಥುನ್ 9ಅವಿನಾಶ್ ಯಾದವ್ ಬ್ಯಾಟಿಂಗ್ 29ಇತರ: 5. ವಿಕೆಟ್ ಪತನ: 1-5, 2-20, 3-23, 4-23, 5-29, 6-45. ಬೌಲಿಂಗ್: ಅಭಿಮನ್ಯು ಮಿಥುನ್ 8-4-18-2, ಪ್ರತೀಕ್ ಜೈನ್ 13-7-14-4, ರೋನಿತ್ ಮೋರೆ 6-2-10-0, ಕೆ. ಗೌತಮ್ 14-5-28-0, ಶ್ರೇಯಸ್ 8-0-25-0. 01: ಮಧ್ಯ ಪ್ರದೇಶದ ರವಿ ಯಾದವ್ ರಣಜಿ ಟ್ರೋಫಿ ಪದಾರ್ಪಣೆಯ ಪಂದ್ಯದ ಮೊದಲ ಓವರ್​ನಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.