Preity Zinta : ಕೆಲವೇ ದಿನಗಳ ಹಿಂದಷ್ಟೇ ಮುಕ್ತಾಯವಾದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ಸೋಲುಂಡಿದ್ದು ಗೊತ್ತೇ ಇದೆ. ಪಂಜಾಬ್ ಅಭಿಮಾನಿಗಳಿಗೆ ಈ ಸೋಲು ತುಂಬಾ ನೋವುಂಟು ಮಾಡಿದೆ. ಟೂರ್ನಿ ಮುಕ್ತಾಯವಾದ ಮೂರು ದಿನಗಳ ಬಳಿಕ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಜೂನ್ 3ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿದ ಪಂಜಾಬ್ ಕಿಂಗ್ಸ್, ಕೇವಲ 6 ರನ್‌ಗಳಿಂದ ಸೋತಿತು. ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್‌ಗೆ ಇದು ಎರಡನೇ ಫೈನಲ್ ಆಗಿತ್ತು. ಮತ್ತೆ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿರುವುದು ನಿಜಕ್ಕೂ ದುಃಖಕರವಾಗಿದೆ.
ಐಪಿಎಲ್ 2025ರ ಋತುವಿನಲ್ಲಿ ಪಂಜಾಬ್ ತಂಡ ಅದ್ಭುತವಾಗಿ ಆಡಿತು. ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ 9 ರಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋತಿತು. ಇನ್ನೊಂದು ಪಂದ್ಯದಲ್ಲಿ ಫಲಿತಾಂಶ ಬರಲಿಲ್ಲ. ಇದರೊಂದಿಗೆ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ 19 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತ್ತು. ಕ್ವಾಲಿಫೈಯರ್ 1ರಲ್ಲಿ ಆರ್‌ಸಿಬಿ ವಿರುದ್ಧ 8 ವಿಕೆಟ್‌ಗಳಿಂದ ಸೋತ ಪಂಜಾಬ್, ಕ್ವಾಲಿಫೈಯರ್ 2ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿತು. ಆದರೆ ಕೊನೆಯ ಪಂದ್ಯದಲ್ಲಿ ಮತ್ತೆ ಸೋತು ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.
ಈ ಹಿನ್ನೆಲೆಯಲ್ಲಿ, ಪ್ರೀತಿ ಜಿಂಟಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾವು ಬಯಸಿದ ರೀತಿಯಲ್ಲಿ ಟೂರ್ನಿ ಕೊನೆಯಾಗಲಿಲ್ಲ. ಆದರೆ, ಪ್ರಯಾಣ ಅದ್ಭುತವಾಗಿತ್ತು. ರೋಮಾಂಚಕಾರಿ ಹಾಗೂ ಸ್ಪೂರ್ತಿದಾಯಕವಾಗಿದ್ದ ಈ ಸೀಸನ್ನಲ್ಲಿ ನಮ್ಮ ಯುವ ತಂಡವು ತೋರಿಸಿದ ಹೋರಾಟ ಮಾತ್ರವಲ್ಲ, ಪರಿಶ್ರಮವೂ ಅದ್ಭುತವಾಗಿತ್ತು. ನಮ್ಮ ನಾಯಕ ತಂಡವನ್ನು ಮುಂದೆ ನಿಂತು ಮುನ್ನಡೆಸಿದ್ದಲ್ಲದೆ, ಈ ಐಪಿಎಲ್‌ನಲ್ಲಿ ಅನನುಭವಿ ಭಾರತೀಯ ಆಟಗಾರರನ್ನು ಸಹ ಶ್ರೇಷ್ಠರನ್ನಾಗಿ ಮಾಡಲು ಶ್ರಮಿಸಿದರು ಎಂದು ಪ್ರೀತಿ ಜಿಂಟಾ ಹೇಳಿದ್ದಾರೆ.
ಈ ವರ್ಷದ ಐಪಿಎಲ್‌ನಲ್ಲಿ ಹಲವು ವಿಶೇಷತೆಗಳನ್ನು ಹೊಂದಿದೆವು. ಗಾಯದ ಸಮಸ್ಯೆಯಿಂದಾಗಿ ಕೆಲವು ಪ್ರಮುಖ ಆಟಗಾರರನ್ನು ಕಳೆದುಕೊಂಡಿದ್ದರೂ, ಪಂದ್ಯಾವಳಿಯನ್ನು ಮಧ್ಯದಲ್ಲಿ ನಿಲ್ಲಿಸಿದರೂ, ತವರಿನ ಪಂದ್ಯಗಳನ್ನು ಇತರ ರಾಜ್ಯಗಳಿಗೆ ಸ್ಥಳಾಂತರಿಸಿದರೂ, ಕ್ರೀಡಾಂಗಣವನ್ನು ಖಾಲಿ ಮಾಡಿದರು ಕೂಡ ನಾವು ಹಿಂದೆ ಬೀಳದೆ ಮುಂದೆ ಸಾಗಿದೆವು. ಒಂದು ದಶಕದ ನಂತರ ನಾವು ಅಂಕಪಟ್ಟಿಯ ಮೇಲ್ಭಾಗದಲ್ಲಿ ನಿಂತೆವು. ನಾವು ಫೈನಲ್ವರೆಗೆ ಹೋರಾಡಿದೆವು. ತಂಡದ ಪ್ರತಿಯೊಬ್ಬ ಆಟಗಾರನ ಮೇಲೂ ನನಗೆ ನಂಬಿಕೆ ಇದೆ. ನಮ್ಮ ಬೆಂಬಲ ಸಿಬ್ಬಂದಿ ಹಾಗೂ ಅಭಿಮಾನಿಗಳ ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲದಿಂದಾಗಿ ನಾವು ಇಲ್ಲಿಯವರೆಗೆ ಬಂದಿದ್ದೇವೆ. ಕೆಲಸ ಇನ್ನೂ ಮುಗಿದಿಲ್ಲ. ಮುಂದಿನ ವರ್ಷ ಕ್ರೀಡಾಂಗಣದಲ್ಲಿ ಮತ್ತೆ ಭೇಟಿಯಾಗುತ್ತೇವೆ. ಅಲ್ಲಿಯವರೆಗೆ, ಜಾಗರೂಕರಾಗಿರಿ. ಲವ್ ಯು ಆಲ್... ಟಿಂಗ್! ಎಂದು ಬರೆಯುವ ಮೂಲಕ ಪ್ರೀತಿ ಜಿಂಟಾ ತಮ್ಮ ಸಂದೇಶವನ್ನು ಮುಗಿಸಿದರು. (ಏಜೆನ್ಸೀಸ್)