ಮುಂಬೈ: ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (ಸಿಪಿಎಲ್) ಆಡಲು ತುದಿಗಾಲಲ್ಲಿ ನಿಂತಿರುವ ಮುಂಬೈ ತಂಡದ ಮಾಜಿ ಆಟಗಾರ ಪ್ರವೀಣ್ ತಂಬೆ ದೇಶೀಯ ಕ್ರಿಕೆಟ್ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಇದಕ್ಕೂ ಮೊದಲು ನಿವೃತ್ತಿ ಘೋಷಿಸಿ ವಾಪಸ್ ಪಡೆದಿದ್ದ ಪ್ರವೀಣ್ ತಂಬೆ ಇದೀಗ 2ನೇ ಬಾರಿ ಅಧಿಕೃತವಾಗಿ ನಿವೃತ್ತಿ ಹೇಳಿದ್ದು, ಸಿಪಿಎಲ್ನಲ್ಲಿ ಆಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ನಿರಾಕ್ಷೇಪಣಾ ಪತ್ರವೂ (ಎನ್ಒಸಿ) ದಕ್ಕಲಿದೆ. 48 ವರ್ಷದ ತಂಬೆ ಅವರನ್ನು ಶಾರೂಕ್ ಖಾನ್ ಒಡೆತನ ಸಿಪಿಎಲ್ ತಂಡ ಟ್ರಿನಿಬಾಗೊ ನೈಟ್ ರೈಡರ್ಸ್ ತಂಡ ಸೋಮವಾರ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಸಿಪಿಎಲ್ನಲ್ಲಿ ಆಡಲಿರುವ ಭಾರತದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: VIDEO: ಎಂಎಸ್ ಧೋನಿಗೆ ಅಗ್ರಕ್ರಮಾಂಕದಲ್ಲಿ ಆಡುವ ಸಾಮರ್ಥ್ಯವಿತ್ತು ಎಂದ ಸೌರವ್ ಗಂಗೂಲಿ
ಪ್ರಥಮ ದರ್ಜೆ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದು, ಬಿಸಿಸಿಐ ನಿಯಮದಂತೆ ನಿವೃತ್ತಿ ಹೊಂದಿದ್ದರಷ್ಟೇ ವಿದೇಶಿ ಲೀಗ್ಗಳಲ್ಲಿ ಆಡಲು ಸಾಧ್ಯ. ಇದೀಗ ತಂಬೆ ಸಿಪಿಎಲ್ನಲ್ಲಿ ಆಡಲು ಆರ್ಹರಾದರೆ, ಐಪಿಎಲ್ನಲ್ಲಿ ಆಡುವಂತಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 6 ತಂಡಗಳ ಸಿಪಿಎಲ್ 2020ರ ಟೂರ್ನಿ ಆಗಸ್ಟ್ 8 ರಿಂದ ಸೆಪ್ಟೆಂಬರ್ 10 ರವರೆಗೆ ನಡೆಯಲಿದ್ದು, ಕರೊನಾ ವೈರಸ್ ಭೀತಿಯಿಂದಾಗಿ ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಪ್ರವೀಣ್ ತಂಬೆ 41ನೇ ವಯಸ್ಸಿನಲ್ಲಿ ರಾಜಸ್ಥಾನ ರಾಯಲ್ಸ್ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. ವಿಶ್ವ ಶ್ರೀಮಂತ ಕ್ರಿಕೆಟ್ ಲೀಗ್ಗೆ ಪದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. ರಾಯಲ್ಸ್ ಪರ ಆಡಿದ್ದ 33 ಪಂದ್ಯಗಳಿಂದ 28 ವಿಕೆಟ್ ಕಬಳಿಸಿದ್ದರು. ಒಂದು ವೇಳೆ ಅಂತಾರಾಷ್ಟ್ರೀಯ ಪ್ರಮಾಣದ ನಿರ್ಬಂಧ ಮುಂದುವರಿದಲ್ಲಿ ತಂಬೆ ಪ್ರಸಕ್ತ ವರ್ಷದ ಸಿಪಿಎಲ್ ಕನಸು ಕೂಡ ಕಮರಲಿದೆ.
ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧಿಕಾರಿಗಳು ತಂಬೆ ನಿವೃತ್ತಿಯನ್ನು ಖಚಿತಪಡಿಸಿದ್ದಾರೆ. ಸದ್ಯ ತಂಬೆ ನಿವೃತ್ತಿಯಾಗಿದ್ದಾರೆ, ಇದಕ್ಕೂ ಮೊದಲು ನಿವೃತ್ತಿಯಾಗಿ, ವಾಪಸ್ ಪಡೆದಿದ್ದರು. ಈ ಬಾರಿ ಇಮೇಲ್ ಮೂಲಕ ನಿವೃತ್ತಿ ಹೇಳಿದ್ದಾರೆ ಎಂದು ಎಂಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಐಪಿಎಲ್ನಲ್ಲಿ 20 ಲ ರೂಪಾಯಿಗೆ ಕೆಕೆಆರ್ ತಂಡದ ಪಾಲಾಗಿದ್ದರೂ ತಂಬೆ ಟಿ10 ಲೀಗ್ನಲ್ಲಿ ಆಡಿದ ಹಿನ್ನೆಲೆಯಲ್ಲಿ ಬಿಸಿಸಿಐ ಅವರನ್ನು ಅಮಾನತುಗೊಳಿಸಿತ್ತು.