ಕ್ರೀಡೆ

ಕಡೆಗೂ ಪ್ರತೀಕಾ ರಾವಲ್​ ಕೊರಳಿನಲ್ಲಿ ವಿಜೇತ ಪದಕ! ಐಸಿಸಿ ನಿಯಮ ಬದಲಿಸಿತು ಅನ್ನೋದಕ್ಕೆ ಈ ಫೋಟೋ ಸಾಕ್ಷಿ? | Pratika Rawal

ನವದೆಹಲಿ: ನ.02ರಂದು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಬಹು ವರ್ಷಗಳ ಮಹಾದಾಸೆ ಕಡೆಗೂ ಈಡೇರಿದ್ದು ಇತಿಹಾಸ (Pratika Rawal). ಬಹುನಿರೀಕ್ಷಿತ ಟ್ರೋಫಿಯಾಗಿದ್ದ ಏಕದಿನ ವಿಶ್ವಕಪ್ ಅನ್ನು ಭಾರತೀಯ ಮಹಿಳಾ ತಂಡ ಗೆದ್ದು ಬೀಗಿದ್ದು ದೇಶಾದ್ಯಂತ ಹರ್ಷೋದ್ಘಾರಕ್ಕೆ ಸಾಕ್ಷಿಯಾಯಿತು. ಫೈನಲ್​ನಲ್ಲಿ ಆಡಿದ ತಂಡದ ಎಲ್ಲ ಆಟಗಾರ್ತಿಯರಿಗೂ ಮೆಡಲ್​ ಸಿಕ್ಕಿದ್ದೇ ಆದರೂ ಟೂರ್ನಿಯಲ್ಲಿ 308 ರನ್ ಕೊಡುಗೆ ನೀಡಿದ ಪ್ರತಿಕಾ ರಾವಲ್​ಗೆ ಮಾತ್ರ ಪದಕ ಕೊಡಲಿಲ್ಲ. ಕಾರಣ, ಐಸಿಸಿ ನಿಯಮ. ​

ಯುವ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಕೂಡ ಮಹಿಳಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೂ ಸಹ ಅವರಿಗೆ ಐಸಿಸಿ ನೀಡುವ ವಿಜೇತ ಪದಕ ಗೆಲುವಿನ ವೇದಿಕೆಯಲ್ಲಿ ಸಿಗಲಿಲ್ಲ. ಇದು ಕ್ರಿಕೆಟ್​ ಪ್ರಿಯರ ಬೇಸರಕ್ಕೆ ಕಾರಣವಾಯಿತು. ಈ ಮೆಗಾ ಟೂರ್ನಿಯಲ್ಲಿ, ಏಳು ಪಂದ್ಯಗಳನ್ನಾಡಿದ ರಾವಲ್,​ 51.33 ಸರಾಸರಿಯಲ್ಲಿ 308 ರನ್ ಗಳಿಸಿದ್ದಾರೆ. ಬಾಂಗ್ಲಾ ವಿರುದ್ಧದ ಪಂದ್ಯದವರೆಗೂ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಪ್ರತೀಕಾ, ಸೆಮಿ ಮತ್ತು ಫೈನಲ್​ ಮ್ಯಾಚ್​ಗೆ ಇಂಜುರಿಯಿಂದ ಅಲಭ್ಯರಾದರು. ಅದೇ ಅವರಿಂದ ಪದಕವನ್ನು ಕಿತ್ತುಕೊಂಡಿತು.

ಐಸಿಸಿ ಕೊಡದಿರಲು ಕಾರಣವೇನು?

ಟೂರ್ನಿಯಲ್ಲಿ ಪ್ರತೀಕಾ ರಾವಲ್ ಉತ್ತಮ ಪ್ರದರ್ಶನ ನೀಡಿದ್ದೇ ಆದರೂ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರು ಗಾಯಗೊಂಡರು. ಈ ಕಾರಣದಿಂದಾಗಿ, ಟೀಮ್ ಮ್ಯಾನೇಜ್​ಮೆಂಟ್​ ರಾವಲ್​ ಸ್ಥಾನಕ್ಕೆ ಶೆಫಾಲಿ ವರ್ಮಾ ಅವರನ್ನು ಕರೆತಂದಿತು. ಐಸಿಸಿ ನಿಯಮಗಳ ಪ್ರಕಾರ, ವಿಜೇತ ತಂಡದ ಕೇವಲ 15 ಸದಸ್ಯರಿಗೆ ಮಾತ್ರ ಪದಕಗಳನ್ನು ನೀಡಲಾಗುತ್ತದೆ. ಹೀಗಾಗಿಯೇ ಫೈನಲ್​ ಪಂದ್ಯದ ತಂಡದಲ್ಲಿ ಅವರ ಅನುಪಸ್ಥಿತಿಯೇ ಪದಕ ಕೈತಪ್ಪಲು ಕಾರಣವಾಯಿತು.

ಫೋಟೋಗಾಗಿ ಕೊಟ್ಟ ಪದಕವೇ?

ಇದೆಲ್ಲದರ ನಡುವೆ ಇದೀಗ ಪ್ರತೀಕಾ ಕೊರಳಿಗೆ ವಿಜೇತ ಪದಕ ಸೇರಿರುವುದು ಸದ್ಯ ಸಂತಸ ಹಾಗೂ ಗೊಂದಲಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಡನೆ ಗೆಲುವಿನ ಸಂಭ್ರಮ ಹಂಚಿಕೊಂಡ ಭಾರತ ಮಹಿಳಾ ತಂಡದ ವೀರ ವನಿತೆಯರು, ಪ್ರಧಾನಿ ಜತೆ ಫೋಟೋಗೆ ನಿಂತರು. ಈ ವೇಳೆ ಪ್ರತೀಕಾ ರಾವಲ್​ ಕೊರಳಿನಲ್ಲಿಯೂ ವಿಜೇತ ಪದಕ ಇರುವುದು ಕಾಣಿಸಿದೆ. ಅಸಲಿಗೆ ಇದು ತಂಡದ ಸಹ ಆಟಗಾರ್ತಿಯೊಬ್ಬರು ಫೋಟೋಗಾಗಿ ಕೊಟ್ಟಿರಬಹುದು ಎಂಬ ಅಭಿಪ್ರಾಯಗಳು ಮೂಡಿವೆ. ಮತ್ತೊಂದೆಡೆ, ಅವರಿಗೆ ಪದಕ ಸಿಕ್ಕಿರುವುದು ಖಚಿತ ಎಂದು ಸ್ವತಃ ರಾವಲ್​, ಐಸಿಸಿ ಅಥವಾ ಬಿಸಿಸಿಐ ಆಗಲಿ ಅಧಿಕೃತವಾಗಿ ಎಲ್ಲಿಯೂ ತಿಳಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಲೋಕ ಕಲ್ಯಾಣ ಮಾರ್ಗದ ಅಧಿಕೃತ ನಿವಾಸದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸಂವಾದ ನಡೆಸಿದ ಹರ್ಮನ್​ಪ್ರೀತ್​ ಕೌರ್​ ಪಡೆ, ಗೆಲುವಿನ ಕ್ಷಣಗಳನ್ನು ಹಂಚಿಕೊಂಡರು. ಪ್ರಧಾನಿ ಜತೆಗಿನ ತಂಡದ ಫೋಟೋ ಸದ್ಯ ಜಾಲತಾಣಗಳಲ್ಲಿ ಹರಿದಾಡಿದೆ.