ಕ್ರೀಡೆ

ಮೈದಾನಕ್ಕೆ ಬಂದರೂ ಸಿಗಲಿಲ್ಲ ವಿಜೇತ ಪದಕ! 308 ರನ್​ ಗಳಿಸಿದ ಪ್ರತೀಕಾ ರಾವಲ್​ಗೆ ಮೆಡಲ್​ ಕೊಡದಿರಲು ಕಾರಣವೇನು? | Pratika Rawal

ನವದೆಹಲಿ: ಬಹು ವರ್ಷಗಳ ಮಹಾದಾಸೆ ಕಡೆಗೂ ನ.02ರಂದು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಈಡೇರಿದ್ದು ಇದೀಗ ಇತಿಹಾಸ. ಬಹುನಿರೀಕ್ಷಿತ ಟ್ರೋಫಿಯಾಗಿದ್ದ ಏಕದಿನ ವಿಶ್ವಕಪ್ ಅನ್ನು ಭಾರತೀಯ ಮಹಿಳಾ ತಂಡ ಗೆದ್ದು ಬೀಗಿದ್ದು ಸದ್ಯ ದೇಶಾದ್ಯಂತ ಹರ್ಷೋದ್ಘಾರಕ್ಕೆ ಸಾಕ್ಷಿಯಾಯಿತು. ತಂಡದೊಂದಿಗೆ ಚೊಚ್ಚಲ ವಿಶ್ವಕಪ್​ ಟ್ರೋಫಿ ಎತ್ತಿಹಿಡಿದ ನಾಯಕಿ ಹರ್ಮನ್​ಪ್ರೀತ್​ ಕೌರ್ ಪಡೆಗೆ, ಐಸಿಸಿ ನೀಡಿದ ವಿಜೇತ ಪದಕ ಹಸ್ತಾಂತರವಾಯಿತು. ಆದರೆ, ತಂಡದ ಸಹ ಆಟಗಾರ್ತಿ ಪ್ರತಿಕಾ ರಾವಲ್​ಗೆ ಮಾತ್ರ ಇದು ಸಿಗದಿರುವುದು ಸದ್ಯ ಹಲವರ ಗೊಂದಲಕ್ಕೆ ಕಾರಣವಾಗಿದೆ. ​

ಯುವ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಕೂಡ ಮಹಿಳಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೂ ಸಹ ಅವರಿಗೆ ಐಸಿಸಿ ನೀಡುವ ವಿಜೇತ ಪದಕ ಸಿಗಲಿಲ್ಲ. ಈ ಮೆಗಾ ಟೂರ್ನಿಯಲ್ಲಿ, ಏಳು ಪಂದ್ಯಗಳನ್ನಾಡಿರುವ ರಾವಲ್,​ 51.33 ಸರಾಸರಿಯಲ್ಲಿ 308 ರನ್ ಗಳಿಸಿದರು. ಬಾಂಗ್ಲಾ ವಿರುದ್ಧದ ಪಂದ್ಯದವರೆಗೂ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಪ್ರತೀಕಾ, ಸೆಮಿ ಮತ್ತು ಫೈನಲ್​ ಮ್ಯಾಚ್​ಗೆ ಇಂಜುರಿಯಿಂದ ಅಲಭ್ಯರಾದರು.

ಇಂಜುರಿಯಿಂದ ಕೈತಪ್ಪಿತು ಮೆಡಲ್​

ಟೂರ್ನಿಯಲ್ಲಿ ಪ್ರತೀಕಾ ರಾವಲ್ ಉತ್ತಮ ಪ್ರದರ್ಶನ ನೀಡಿದ್ದೇ ಆದರೂ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರು ಗಾಯಗೊಂಡರು. ಈ ಕಾರಣದಿಂದಾಗಿ, ಟೀಮ್ ಮ್ಯಾನೇಜ್​ಮೆಂಟ್​ ರಾವಲ್​ ಸ್ಥಾನಕ್ಕೆ ಶೆಫಾಲಿ ವರ್ಮಾ ಅವರನ್ನು ಕರೆತಂದಿತು. ಐಸಿಸಿ ನಿಯಮಗಳ ಪ್ರಕಾರ, ವಿಜೇತ ತಂಡದ ಕೇವಲ 15 ಸದಸ್ಯರಿಗೆ ಮಾತ್ರ ಪದಕಗಳನ್ನು ನೀಡಲಾಗುತ್ತದೆ. ಫೈನಲ್​ ಪಂದ್ಯದ ತಂಡದಲ್ಲಿ ಅವರ ಅನುಪಸ್ಥಿತಿಯೇ ಪದಕ ಕೈತಪ್ಪಲು ಕಾರಣ.

ಪ್ರತಿಕಾ ರಾವಲ್ ಬದಲಿಗೆ ಬಂದ ಶೆಫಾಲಿ ವರ್ಮಾ ಸೆಮಿಫೈನಲ್‌ ಪಂದ್ಯದಲ್ಲಿ ವಿಫಲರಾದರು. ಆದಾಗ್ಯೂ, ಅಂತಿಮ ಪಂದ್ಯದಲ್ಲಿ, ಅವರು ಆಲ್‌ರೌಂಡ್ ಪ್ರದರ್ಶನದೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ಯಾಟಿಂಗ್‌ನಲ್ಲಿ 87 ರನ್ ಗಳಿಸಿದ ಅವರು, ಬೌಲಿಂಗ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ವೀಲ್‌ಚೇರ್‌ನಲ್ಲಿ ವೇದಿಕೆಗೆ...

ಟೀಮ್ ಇಂಡಿಯಾ ಫೈನಲ್ ಪಂದ್ಯವನ್ನು ಗೆದ್ದ ಬಳಿಕ ಪ್ರತೀಕಾ ರಾವಲ್ ವೀಲ್‌ಚೇರ್‌ನಲ್ಲಿಯೇ ಮೈದಾನಕ್ಕೆ ಬಂದರು. ತಮ್ಮ ತಂಡದೊಂದಿಗೆ ವೇದಿಕೆಗೆ ತೆರಳಿ, ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ವೇಳೆ ಭಾವುಕರಾಗಿ ಮಾತನಾಡಿದ ರಾವಲ್​, ಟೀಮ್ ಇಂಡಿಯಾದ ವಿಶ್ವಕಪ್ ಗೆಲುವು ತುಂಬಾ ಸಂತೋಷ ತಂದಿದೆ. ಈ ಗೆಲುವನ್ನು ವಿವರಿಸಲು ಪದಗಳಿಲ್ಲ. ಈ ಧ್ವಜವನ್ನು ನನ್ನ ಹೆಗಲ ಮೇಲೆ ಇಟ್ಟುಕೊಂಡಿರುವುದು ತುಂಬಾ ಗೌರವವಿದೆ ಎಂದು ಹೇಳಿದರು,(ಏಜೆನ್ಸೀಸ್).