ಶಿವಮೊಗ್ಗ: ಆರಂಭಿಕ ಪ್ರಕಾರ್ ಚತುರ್ವೇದಿ (ಅಜೇಯ 256 ರನ್, 451 ಎಸೆತ, 29 ಬೌಂಡರಿ, 1 ಸಿಕ್ಸರ್) ಭರ್ಜರಿ ದ್ವಿಶತಕದ ಬಲದಿಂದ ಆತಿಥೇಯ ಕರ್ನಾಟಕ ಎದುರಾಳಿ ಮುಂಬೈ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 626 ರನ್ ಗಳಿಸಿದ್ದು ಭಾರಿ ಮುನ್ನಡೆ ಪಡೆದಿದೆ. ಮೂರನೇ ದಿನದ ಅಂತ್ಯಕ್ಕೆ 246 ರನ್ ಮುನ್ನಡೆ ಕಾಯ್ದುಕೊಂಡಿರುವ ಕರ್ನಾಟಕ ಚೊಚ್ಚಲ ಬಾರಿಗೆ 19 ವರ್ಷದೊಳಗಿನ ಕೂಚ್ ಬೆಹಾರ್ ಟ್ರೋಫಿ ಎತ್ತಿಹಿಡಿಯುವತ್ತ ದಾಪುಗಾಲಿಟ್ಟಿದೆ.
ನವುಲೆ ಕೆಎಸ್‌ಸಿಎ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದ ಮೂರನೇ ದಿನದಾಟದಲ್ಲಿ ಬೃಹತ್ ರನ್ ಕಲೆಹಾಕಿದ ಆತಿಥೇಯರು ಎದುರಾಳಿ ತಂಡದ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿದರು. ಸೋಮವಾರ ಕೊನೆಯ ದಿನದಾಟವಿದ್ದು ಮೊದಲ ಅವಧಿ ಮುಕ್ತಾಯದ ಬಳಿಕ ಅಥವಾ ಅದಕ್ಕೂ ಮುಂಚೆಯೇ ಇನಿಂಗ್ಸ್ ಡಿಕ್ಲೇರ್ ಘೋಷಿಸಿ ಪ್ರವಾಸಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸುವ ನಿರೀಕ್ಷೆ ಇದೆ.
ಎರಡನೇ ದಿನದಂತ್ಯಕ್ಕೆ 110 ರನ್ ಗಳಿಸಿದ್ದ ಪ್ರಕಾರ್ ಚತುರ್ವೇದಿ ಮತ್ತು 102 ರನ್ ಗಳಿಸಿದ್ದ ಹರ್ಷಿಲ್ ಧರ್ಮಾನಿ ಮೂರನೇ ದಿನವೂ ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ 290 ರನ್ ಕಲೆಹಾಕಿತು. 228 ಎಸೆತಗಳನ್ನು ಎದುರಿಸಿ 19 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 169 ರನ್ ಗಳಿಸಿದ ಹರ್ಷಿಲ್, ಆಕಾಶ್ ಪವಾರ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಕೆ.ಪಿ.ಕಾರ್ತಿಕೇಯ (72 ರನ್, 107 ಎಸೆತ, 7 ಬೌಂಡರಿ, 2 ಸಿಕ್ಸರ್) ಜತೆಗೂಡಿದ ಪ್ರಕಾರ್ ಚತುರ್ವೇದಿ ದ್ವಿಶತಕ ಪೂರೈಸಿ ಸಂಭ್ರಮಿಸಿದರು. ಕಾರ್ತಿಕೇಯ ಜತೆ ಮೂರನೇ ವಿಕೆಟ್‌ಗೆ ಮಹತ್ವದ 157 ರನ್ ಜತೆಯಾಟವಾಡಿದರು.
ಕಾರ್ತಿಕೇಯ ವಿಕೆಟ್ ಪತನದ ಬಳಿಕ ಬಂದ ಆಲ್‌ರೌಂಡರ್ ಸಮಿತ್ ದ್ರಾವಿಡ್ 2 ಬೌಂಡರಿ, 1 ಸಿಕ್ಸರ್ ಸಹಿತ 22 ರನ್ ಗಳಿಸಿದರು. ನಂತರ ಧ್ರುವ ಪ್ರಭಾಕರ್(3), ನಾಯಕ ಧೀರಜ್ ಗೌಡ(7) ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ಮುಂದುವರಿಸಿದ ಪ್ರಕಾರ್ ಮೂರನೇ ದಿನದಂತ್ಯಕ್ಕೆ ಉಪನಾಯಕ ಹಾರ್ದಿಕ ರಾಜ್ (ಅಜೇಯ 5) ಜತೆ ಕ್ರೀಸ್‌ನಲ್ಲಿದ್ದರು. ಮುಂಬೈ ಪರ ನಾಯಕ ಮನನ್ ಭಟ್ ಸೇರಿ ಒಂಬತ್ತು ಮಂದಿ ಬೌಲಿಂಗ್ ಮಾಡಿದರೂ ಕರ್ನಾಟಕವನ್ನು ಆಲೌಟ್ ಮಾಡಲು ಸಾಧ್ಯವಾಗಲಿಲ್ಲ.