ಕ್ರೀಡೆ

ಹಾಕಿಯಲ್ಲಿ ಐತಿಹಾಸಿಕ ದಾಖಲೆ ಬರೆದ ಭಾರತ! ಗೆಲುವಿನೊಂದಿಗೆ ಭಾವುಕ ವಿದಾಯ ಹೇಳಿದ ಗೋಲ್​ಕೀಪರ್​ ಪಿ.ಆರ್.​ ಶ್ರೀಜೇಶ್

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ 2024ರಲ್ಲಿ ಭಾರತದ ಪದಕದಾಟ ಭರ್ಜರಿಯಿಂದ ಸಾಗುತ್ತಿದೆ. ಕಳೆದ ವಾರ (ಆ.04) ಬ್ರಿಟನ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡವು ಅದ್ಭುತ ಗೆಲುವು ದಾಖಲಿಸುವ ಮೂಲಕ ಇದೀಗ ಸೆಮಿಫೈನಲ್​ಗೆ ಲಗ್ಗೆಯಿಟ್ಟಿತು. ಈಗಾಗಲೇ ಮೂರು ಪದಕಗಳನ್ನು ಗೆದ್ದಿರುವ ಭಾರತಕ್ಕೆ ಇನ್ನೊಂದು ಮೆಡಲ್​ ಸನ್ನಿಹಿತದಲ್ಲಿತ್ತು. ಇದೀಗ ಆ ಆಸೆಯನ್ನು ಕಡೆಗೂ ಈಡೇರಿಸಿರುವ ಹರ್ಮನ್‌ಪ್ರೀತ್ ಸಿಂಗ್ ತಂಡ ಇಂದು ನಡೆದ ಸ್ಪೈನ್​ ವಿರುದ್ಧ ರೋಚಕ ಮ್ಯಾಚ್​ನಲ್ಲಿ 2-1 ಅಂತರದಿಂದ ಗೆದ್ದು, ಕಂಚಿಗೆ ಮುತ್ತಿಟ್ಟಿದೆ.

ಹಾಕಿಯಲ್ಲಿ ಐತಿಹಾಸಿಕ ದಾಖಲೆ ಬರೆದಿರುವ ಭಾರತ 1972ರ ನಂತರದಲ್ಲಿ ಇದೇ ಮೊದಲ ಬಾರಿಗೆ ಬ್ಯಾಕ್ ಟು ಬ್ಯಾಕ್ ಪದಕಗಳನ್ನು ಗೆದ್ದಿರುವುದು. ಒಲಿಂಪಿಕ್ಸ್‌ ಹಾಕಿ ಓಟದಲ್ಲಿ ಭಾರತಕ್ಕೆ ಇದು 13ನೇ ಪದಕವಾಗಿದೆ. ಈ ದಾಖಲೆಗೆ ಕಾರಣರಾದ ಕ್ಯಾಪ್ಟನ್ ಹರ್ಮನ್‌ಪ್ರೀತ್ ಸಿಂಗ್ ತಂಡಕ್ಕೆ ಇದೀಗ ದೇಶವ್ಯಾಪಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕಂಚು ಗೆದ್ದ ಖುಷಿಯಲ್ಲಿರುವ ತಂಡಕ್ಕೆ ದಿಗ್ಗಜ ಆಟಗಾರ, ಗೋಲ್​ಕೀಪರ್​ ಪಿ.ಆರ್​. ಶ್ರೀಜೇಶ್​ ಅವರ ವಿದಾಯ ಕಣ್ಣಂಚಲಿ ನೀರು ತರಿಸಿದೆ.

ಪ್ಯಾರಿಸ್‌ ಒಲಿಂಪಿಕ್ಸ್​ 2024ರ ಪದಕದಾಟದಲ್ಲಿ ಕಂಚಿನ ಪದಕದೊಂದಿಗೆ ತಮ್ಮ ವೃತ್ತಿಜೀವನಕ್ಕೆ ಪೂರ್ಣವಿರಾಮ ಇಟ್ಟ ಪಿ.ಆರ್​. ಶ್ರೀಜೇಶ್, ತಮ್ಮ ಗೋಲ್​ಕೀಪಿಂಗ್ ಗ್ಲೌಸ್​ ತೆಗೆದಿಟ್ಟು, ಅದಕ್ಕೆ ನಮಸ್ಕರಿಸುವ ಮೂಲಕ ಭಾವುಕ ವಿದಾಯ ಹೇಳಿದ್ದಾರೆ. ಗೌರವ ಸಲ್ಲಿಸಿ, ಎಲ್ಲರಿಗೂ ಧನ್ಯವಾದ ತಿಳಿಸಿದ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಹಾಕಿ ಆಟಗಾರರಲ್ಲಿ ಒಬ್ಬರಾದ ಶ್ರೀಜೇಶ್​ ಅವರ ನಿವೃತ್ತಿಗೆ ಇದೀಗ ಕ್ರೀಡಾ ಅಭಿಮಾನಿಗಳು ತಲೆಬಾಗಿದ್ದಾರೆ.