ಸಿಡ್ನಿ: ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಿದ್ದವು. ಸಿಡ್ನಿಯ ಶೋ ಗ್ರೌಂಡ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ 17 ರನ್ಗಳ ಅಂತರದಲ್ಲಿ ಸೋಲಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಓಪನರ್ಗಳಾದ ಬೆತ್ ಮೂನೇ ಮತ್ತು ಅಲಿಸ್ಸಾ ಹೀಲಿ ಅವರ ಮೊದಲ ವಿಕೆಟ್ ಜೊತೆಯಾಟ 32 ರನ್ಗಳೊಂದಿಗೆ ಟೀಂ ಇಂಡಿಯಾ ನೀಡಿದ್ದ 133 ರನ್ಗಳ ಗೆಲುವಿನ ಗುರಿಯನ್ನು ಬೆನ್ನು ಹತ್ತಿತ್ತು. ಮೊದಲ ವಿಕೆಟ್ ಜೊತೆಯಾಟವನ್ನು ಟೀಂ ಇಂಡಿಯಾದ ಬೌಲರ್ ಶಿಖಾ ಪಾಂಡೆ ಆರನೇ ಓವರ್ನಲ್ಲಿ ಮುರಿದರು. ಆರು ರನ್ ಗಳಿಸಿದ್ದ ಮೂನೆ ಔಟಾಗುವ ಮೂಲಕ ಆಸೀಸ್ ತಂಡದ ಮೊದಲ ವಿಕೆಟ್ ಪತನವಾಯಿತು. ನಂತರ ಹೀಲಿ ಜತೆಗೂಡಿದವರು ಮೆಗ್ ಲ್ಯಾನ್ನಿಂಗ್. ಇವರ ಜೊತೆಯಾಟ 23 ರನ್ಗಳದ್ದಾಗಿತ್ತು. ಇದೇ ವೇಳೆ ರಾಜೇಶ್ವರಿ ಗಾಯಕ್ವಾಡ್ ಐದು ರನ್ ಗಳಿಸಿ ಕ್ರೀಸ್ನಲ್ಲಿದ್ದ ಲ್ಯಾನ್ನಿಂಗ್ ಅವರನ್ನು ಪೆವಿಲಿಯನ್ಗೆ ಅಟ್ಟಿದ್ದರು.
ಆದಾಗ್ಯೂ, ಹೀಲಿ ತನ್ನ ಆಟ ಮುಂದುವರಿಸಿ ಹತ್ತನೇ ಓವರ್ನಲ್ಲಿ ಅರ್ಧ ಶತಕ ದಾಖಲಿಸಿದರು. 51 ರನ್ ಗಳಿಸಿ ಕ್ರೀಸ್ನಲ್ಲಿದ್ದ ಹೀಲಿಗೆ ಪೂನಂ ಯಾದವ್ ಪೆವಿಲಿಯನ್ ದಾರಿ ತೋರಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 67 ರನ್ ಆಗಿತ್ತು.
ನಂತರ ನಡೆದುದು ಸ್ಪಿನ್ ಮೋಡಿ. ಗೆಲುವಿಗೆ 57 ರನ್ ಅಗತ್ಯ ಇದೆ ಎನ್ನುವಾಗ ಆಸ್ಟ್ರೇಲಿಯಾ ತಂಡ ರಾಚೆಲ್ ಹೇಯ್ನ್ಸ್ (6), ಎಲ್ಲಿಸ್ ಪೆರ್ರಿ (0) ಅವರ ವಿಕೆಟ್ಗಳನ್ನು ಕಳೆದುಕೊಂಡಿತು. ಅಶ್ಲೇಗ್ ಗಾರ್ಡನರ್ ಒಂದು ಬದಿಯಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದರು. ಆದರೆ, ಇನ್ನೊಂದು ಬದಿಯಲ್ಲಿ ವಿಕೆಟ್ಗಳು ಉದುರುತ್ತಿದ್ದ ಕಾರಣ ಅವರ ಹೋರಾಟ ಯಶ ಕಾಣಲಿಲ್ಲ. ಕೊನೆಗೆ 17 ರನ್ ಗಳ ಅಂತರದ ಸೋಲನ್ನು ಆಸೀಸ್ ತಂಡ ಕಂಡಿತು.
ಇದಕ್ಕೂ ಮುನ್ನ, ಮೊದಲ ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತ್ತು. ಇದರಲ್ಲಿ ದೀಪ್ತಿ ಶರ್ಮಾ ಅವರ ಅಜೇಯ 49 ರನ್ ಸೇರಿದೆ. ಟೀಂ ಇಂಡಿಯಾದ ಓಪನರ್ಗಳಾದ ಸ್ಮೃತಿ ಮಂದಾನಾ ಮತ್ತು ಶಫಾಲಿ ವರ್ಮಾ ಮೊದಲ ನಾಲ್ಕು ಓವರ್ಗಳಲ್ಲಿ 40 ರನ್ ಪೇರಿಸಿದ್ದರು. 16 ವರ್ಷದ ಶರ್ಮಾ ಆಸೀಸ್ ಸ್ಪಿನ್ನರ್ಗಳ ಬೆವರಿಳಿಸಿದ್ದು, ಬಾಲ್ಗಳನ್ನು ಬೌಂಡರಿ ಗೆರೆ ದಾಟಿಸಿ 29 ರನ್ ಗಳಿಸಿದ್ದರು. ಸ್ಮೃತಿ ಮಂದಾನಾ ಐದನೇ ಓವರ್ನಲ್ಲಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ನಂತರ ಶಫಾಲಿ ವರ್ಮಾ ಕೂಡಾ ಪೆವಿಲಿಯನ್ ಹಾದಿ ಹಿಡಿದರು. ಆಗ ಭಾರತದ ಸ್ಕೋರ್ ಎರಡು ವಿಕೆಟ್ ನಷ್ಟಕ್ಕೆ 43 ರನ್. ನಂತರ ಕ್ರೀಸ್ನಲ್ಲಿದ್ದ ಜೆಮ್ಮಿಯಾ ರೋಡ್ರಿಗ್ರಸ್ ಮತ್ತು ದೀಪ್ತಿ ಶರ್ಮಾ ನಾಲ್ಕನೇ ವಿಕೆಟ್ಗೆ 53 ರನ್ ಕಲೆಹಾಕಿದ್ದರು.
ಸಂಕ್ಷಿಪ್ತ ಸ್ಕೋರ್: ಭಾರತ 132/4( ದೀಪ್ತಿ ಶರ್ಮಾ 49, ಶಫಾಲಿ ವರ್ಮಾ 29, ಜೆಸ್ ಜೊನಾಸ್ಸೆನ್ 2-24)
ಆಸೀಸ್ ತಂಡ 115/10( ಅಲಿಸ್ಸಾ ಹೀಲಿ 51, ಆಶ್ಲೇಘ್ ಗಾರ್ಡನರ್ 34, ಪೂನಂ ಯಾದವ್ 4-19)