ಕ್ರೀಡೆ

ಐಪಿಎಲ್ ಹರಾಜಿಗೆ ಮುನ್ನ ಆಲ್ರೌಂಡ್ ಆಟವಾಡಿ ಮಿಂಚಿದ ಸಚಿನ್ ಪುತ್ರ ಅರ್ಜುನ್

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್, 73 ಪೊಲೀಸ್ ಶೀಲ್ಡ್ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ಆಲ್ರೌಂಡ್ ನಿರ್ವಹಣೆಯೊಂದಿಗೆ ಮಿಂಚಿದ್ದಾರೆ. ಈ ಮೂಲಕ ಚೆನ್ನೈನಲ್ಲಿ ಶುಕ್ರವಾರ ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿಗೆ ಮುನ್ನ ಅರ್ಜುನ್ ನಿರ್ವಹಣೆ ವಿವಿಧ ಫ್ರಾಂಚೈಸಿಗಳ ಗಮನಸೆಳೆಯುವಲ್ಲಿ ಸಫಲರಾಗಿದ್ದಾರೆ. ಅರ್ಜುನ್ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎಂಐಜಿ ಕ್ರಿಕೆಟ್ ಕ್ಲಬ್ ಪರ ಆಡಿದ 21 ವರ್ಷದ ಎಡಗೈ ಆಟಗಾರ ಅರ್ಜುನ್ 31 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್ ಸಹಿತ ಅಜೇಯ 77 ರನ್ ಸಿಡಿಸಿದರು ಮತ್ತು 41 ರನ್‌ಗೆ 3 ವಿಕೆಟ್ ಕಬಳಿಸಿದರು. ಈ ಮೂಲಕ ಎಂಐಜಿ ತಂಡ ಇಸ್ಲಾಂ ಜಿಮ್ಖಾನಾ ತಂಡವನ್ನು 194 ರನ್‌ಗಳಿಂದ ಮಣಿಸಿತು. ಆಫ್​ ಸ್ಪಿನ್ನರ್ ಹಶಿರ್ ದಫೆದಾರ್ ಓವರ್ ಒಂದರಲ್ಲಿ ಅರ್ಜುನ್ 5 ಸಿಕ್ಸರ್ ಸಿಡಿಸುವ ಮೂಲಕ ವಿಜೃಂಭಿಸಿದರು.

ದೇಶೀಯ ಕ್ರಿಕೆಟ್ ಋತುವಿನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮುಂಬೈ ಪರ ಪದಾರ್ಪಣೆ ಮಾಡಿದ್ದ ಅರ್ಜುನ್, ಉತ್ತಮ ನಿರ್ವಹಣೆ ತೋರುವಲ್ಲಿ ಸಫಲರಾಗಿರಲಿಲ್ಲ. ಆದರೆ ಮುಂಬೈ ಪರ ಆಡಿದ ಕಾರಣದಿಂದಾಗಿ ಐಪಿಎಲ್ ಹರಾಜಿಗೆ ಅರ್ಹತೆ ಸಂಪಾದಿಸಿದ್ದರು. ಅರ್ಜುನ್‌ರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಬೇಕೆಂದು ಈಗಾಗಲೆ ಸಚಿನ್ ತೆಂಡುಲ್ಕರ್‌ರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಗಳನ್ನು ಮಂಡಿಸುತ್ತಿದ್ದಾರೆ.