ಕ್ರೀಡೆ

ನಿವಾಸದಿಂದಲೇ ಪೋಲ್​ವಾಲ್ಟ್ ಸ್ಪರ್ಧೆ! ಕರೊನಾ ಲಾಕ್​ಡೌನ್​ ಹಿನ್ನೆಲೆ

vinaymk1969

ಪ್ಯಾರಿಸ್: ಕರೊನಾ ವೈರಸ್ ಭೀತಿಯಿಂದಾಗಿ ಎಲ್ಲ ಕ್ರೀಡೆಗಳು ಸ್ತಬ್ಧಗೊಂಡಿರುವ ನಡುವೆ ಕೆಲ ಕ್ರೀಡಾಪಟುಗಳು ಆನ್​ಲೈನ್ ಟೂರ್ನಿಗಳ ಮೂಲಕ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ.

ಇದೀಗ ಅಥ್ಲೆಟಿಕ್ಸ್​ನಲ್ಲೂ ಇಂಥ ಸ್ಪರ್ಧೆಗೆ ವೇದಿಕೆ ಸಜ್ಜಾಗಿದ್ದು, ವಿಶ್ವದ ಅಗ್ರ ಮೂವರು ಪೋಲ್ ವಾಲ್ಟ್ ಸ್ಪರ್ಧಿಗಳು ಮನೆಯಿಂದಲೇ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ಅಲ್ಟಿಮೇಟ್ ಗಾರ್ಡನ್ ಕ್ಲ್ಯಾಷ್’ ಹೆಸರಿನಲ್ಲಿ ಭಾನುವಾರ ಲೈವ್ ವಿಡಿಯೋ ಲಿಂಕ್ ಮೂಲಕ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ವೀಡನ್​ನ ವಿಶ್ವ ದಾಖಲೆ ಒಡೆಯ ಡುಪ್ಲಾಂಟಿಸ್ ಲೌಸಿಯಾನಾದಲ್ಲಿ, ಅಮೆರಿಕದ 2 ಬಾರಿಯ ವಿಶ್ವ ಚಾಂಪಿಯನ್​ಸ್ಯಾಮ್ ಕೆಂಡ್ರಿಕ್ಸ್ ಮತ್ತು ಫ್ರಾನ್ಸ್​ನ ರೆನೌಡ್ ಲಾವಿಲ್ಲೆನಿ ತಮ್ಮ ಮನೆಯ ಗಾರ್ಡನ್​ನಲ್ಲಿ ಪೋಲ್ ಹಾರಲಿದ್ದಾರೆ.

ಯಾವುದೇ ಅಧಿಕಾರಿಗಳ ಮೇಲ್ವಿಚಾರಣೆ ಇರದ ಸ್ಪರ್ಧೆಯಲ್ಲಿ ಈ ಮೂವರು 30 ನಿಮಿಷಗಳ ಅವಧಿಯಲ್ಲಿ 5 ಮೀಟರ್ ಎತ್ತರವನ್ನು ಸಾಧ್ಯವಾದಷ್ಟು ಸಲ ಹಾರಲಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ವೆಬ್​ಸೈಟ್​ನಲ್ಲಿ ಈ ಸ್ಪರ್ಧೆ ನೇರಪ್ರಸಾರವನ್ನೂ ಕಾಣಲಿದೆ.