ಕ್ರೀಡೆ

ನಿಮ್ಮ ಕೈಲಾದ್ರೆ 10 ಟೆಸ್ಟ್​, ಟಿ20, ಏಕದಿನ... ಟೀಮ್​ ಇಂಡಿಯಾಗೆ ಓಪನ್​ ಚಾಲೆಂಜ್​ ಹಾಕಿದ ಸಕ್ಲೈನ್ ಮುಸ್ತಾಕ್​ | Saqlain Mushtaq

Saqlain Mushtaq: ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ ಆತಿಥೇಯ ಪಾಕಿಸ್ತಾನ ತಂಡವೇ ಟೂರ್ನಿಯಲ್ಲಿ ಅತಿಥಿಯಾಗಿ ಹೊರಬಿದ್ದ ವಿಷಯ ಸದ್ಯ ಪಾಕ್​ ಮಾಜಿ ಆಟಗಾರರಿಗೆ ಮತ್ತು ಅಭಿಮಾನಿ ಬಳಗಕ್ಕೆ ಭಾರೀ ಬೇಸರ ಮೂಡಿಸಿದೆ. ಒಂದೆಡೆ ಟೂರ್ನಿಯಿಂದ ಅಧಿಕೃತವಾಗಿ ಹೊರನಡೆದ ವಿಷಯ ಅಸಮಾಧಾನ ತಂದರೆ, ಟೀಮ್ ಇಂಡಿಯಾ ಮಣಿಸಿದ ಕಾರಣದಿಂದ ಚಾಂಪಿಯನ್ಸ್ ಟ್ರೋಫಿ ಕನಸು ಭಗ್ನಗೊಂಡಿತು ಎಂಬ ಸಿಟ್ಟು ಇನ್ನೂ ಪಾಕ್​ ಪ್ರೇಮಿಗಳಲ್ಲಿ ಆರದ ಜ್ವಾಲೆಯಾಗಿ ಕಾಡುತ್ತಿದೆ. ಇದಕ್ಕೆ ಪಾಕಿಸ್ತಾನ ಮಾಜಿ ಹಿರಿಯ ಕ್ರಿಕೆಟಿಗ ಸಕ್ಲೈನ್ ಮುಸ್ತಾಕ್ ನೀಡಿರುವ ಸವಾಲಿನ ಹೇಳಿಕೆಯೇ ಜ್ವಲಂತ ಸಾಕ್ಷಿ. ​

ಆತಿಥೇಯರನ್ನೇ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗಟ್ಟಿದ ಟೀಮ್ ಇಂಡಿಯಾ ವಿರುದ್ಧ ತೀವ್ರ ಕಿಡಿಕಾರಿರುವ ಸಕ್ಲೈನ್​, "ಭಾರತ ನಾವು ತುಂಬ ಬಲಿಷ್ಠ ತಂಡ ಎಂದುಕೊಂಡಿದೆ. ನೀವು ಅತ್ಯುತ್ತಮ ತಂಡವಾಗಿದ್ದರೇ ನಾವು ಹಾಕುವ ಸವಾಲನ್ನು ಸ್ವೀಕರಿಸಿ, ಅದರಲ್ಲಿ ಗೆದ್ದು ತೋರಿಸಿ" ಎಂದು ಟೀಕಿಸಿದ್ದಾರೆ. "ರಾಜಕೀಯ ಗೊಂದಲಗಳನ್ನು ಬದಿಗಿಟ್ಟು ಮಾತನಾಡುವುದಾದರೆ, ಟೀಮ್ ಇಂಡಿಯಾ ಆಟಗಾರರು ಉತ್ತಮವಾಗಿ ಆಡುತ್ತಿದ್ದಾರೆ. ಆದರೆ, ಉತ್ತಮ ತಂಡ ಎಂದು ಸಾಬೀತುಪಡಿಸಲು ನಮ್ಮ ವಿರುದ್ಧದ ಪಂದ್ಯಗಳನ್ನು ಆಡಿ ತೋರಿಸಬೇಕು" ಎಂದಿದ್ದಾರೆ.

"ನಿಮ್ಮದು ನಿಜಕ್ಕೂ ಒಳ್ಳೆಯ ತಂಡ ಎನ್ನುವುದಾದರೆ, 10 ಟೆಸ್ಟ್​, 10 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ನಮ್ಮ ವಿರುದ್ಧ ಆಡಿ, ಗೆದ್ದು ತೋರಿಸಿ. ಆಗ ಎಲ್ಲಾ ಸ್ಪಷ್ಟವಾಗುತ್ತದೆ" ಎಂದರು. ಈ ವೇಳೆ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಕೂಡ ನಾಲಿಗೆ ಹರಿಬಿಟ್ಟಿದ್ದು, "ವಿಶ್ವದ ಎಲ್ಲ ಅಗ್ರ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುತ್ತಾರೆ. ಹಲವು ಬಾರಿ, ವಿದೇಶಿ ಆಟಗಾರರು ರಾಷ್ಟ್ರೀಯ ಪಂದ್ಯಗಳಿಗಿಂತ ಐಪಿಎಲ್ ಪಂದ್ಯಗಳನ್ನು ಬಯಸುತ್ತಾರೆ. ಆದರೆ, ಭಾರತೀಯ ಆಟಗಾರರು ಬೇರೆ ಯಾವುದೇ ಲೀಗ್‌ನಲ್ಲಿ ಆಡುವುದಿಲ್ಲ" ಎಂದರು.

"ಎಲ್ಲ ಕ್ರಿಕೆಟ್ ಮಂಡಳಿಗಳು ಕೂಡ ಇದನ್ನೇ ಪಾಲಿಸಬೇಕು. ತಮ್ಮ ತಂಡಗಳ ಆಟಗಾರರು ಐಪಿಎಲ್‌ನಲ್ಲಿ ಆಡುವುದನ್ನು ತಡೆಯಬೇಕು ಮತ್ತು ಐಪಿಎಲ್​ ಅನ್ನು ಬಹಿಷ್ಕರಿಸಬೇಕು" ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಗ್ರಹಿಸಿದ್ದಾರೆ,(ಏಜೆನ್ಸೀಸ್).