ನವದೆಹಲಿ: ಇಡೀ ವಿಶ್ವದಲ್ಲಿ ಕ್ರೀಡಾಭಿಮಾನಿಗಳು ಯಾವುದಾದರು ಪಂದ್ಯವನ್ನು ಕಾದು ನೋಡುತ್ತಾರೆ ಎಂದರೆ, ಅದು ಭಾರತ (Team India) ಹಾಗೂ ಪಾಕಿಸ್ತಾನ (Pakistan) ನಡುವಿನ ಹೈವೋಲ್ಟೇಜ್ ಪಂದ್ಯ ಎಂದರೆ ತಪ್ಪಾಗಲಾರದು. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಭಾರತ ಹಾಗೂ ಪಾಕಿಸ್ತಾನ ಐಸಿಸಿ ಹಾಗೂ ಎಷ್ಯಾಕಪ್ನಂತಹ ಟೂರ್ನಿಗಳಲ್ಲಿ ಮುಖಾಮುಖಿಯಾಗುತ್ತಿದ್ದು, ಪ್ರತಿಬಾರಿಯೂ ಭಾರತ ಮೇಲುಗೈ ಸಾಧಿಸಿದೆ.
ಐಸಿಸಿ ಹಾಗೂ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕ್ (Pak) ಮುಖಾಮುಖಿಯಾಗುತ್ತಿದ್ದು, ಪ್ರತಿಬಾರಿಯೂ ಟೀಮ್ ಇಂಡಿಯಾ ತನ್ನ ಪಾರುಪತ್ಯವನ್ನು ಸಾಧಿಸಿದೆ. ಭಾರತ ಗೆದ್ದಾಗಲೆಲ್ಲಾ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ವೈರಲ್ ಆಗುತ್ತಿದ್ದು, ಇದೀಗ ಪಾಕಿಸ್ತಾನ ತಂಡದ ಮಾಜಿ ಆಟಗಾರ ಸಕ್ಲೇನ್ ಮುಷ್ತಾಕ್ ಭಾರತದ ವಿರುದ್ಧ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸಕ್ಲೇನ್ ಮುಷ್ತಾಕ್, ನೀವು ನಿಜವಾಗಿಯೂ ಉತ್ತಮ ತಂಡವಾಗಿದ್ದರೆ, ಪಾಕಿಸ್ತಾನದೊಂದಿಗೆ 10 ಟೆಸ್ಟ್‌ಗಳು, 10 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿ ಎಂದು ಭಾರತಕ್ಕೆ ಸವಾಲೆಸೆದಿದ್ದಾರೆ.
ನಾವು ರಾಜಕೀಯ ವಿಷಯಗಳನ್ನು ಬದಿಗಿಟ್ಟರೆ, ಅವರ ಆಟಗಾರರು ತುಂಬಾ ಒಳ್ಳೆಯವರು ಮತ್ತು ಅವರು ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ನೀವು ನಿಜವಾಗಿಯೂ ಉತ್ತಮ ತಂಡವಾಗಿದ್ದರೆ, ಪಾಕಿಸ್ತಾನದ ವಿರುದ್ಧ 10 ಟೆಸ್ಟ್, 10 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಬೇಕು ಎಂದು ನಾನು ಆಗ್ರಹಿಸುತ್ತೇನೆ ಆಗ ಎಲ್ಲವೂ ಸ್ಪಷ್ಟವಾಗುತ್ತದೆ.
ನಾವು ಸರಿಯಾದ ರೀತಿಯಲ್ಲಿ ಸಿದ್ಧತೆ ನಡೆಸಿ ಸರಿಯಾದ ದಿಕ್ಕಿನಲ್ಲಿ ಹೋದರೆ ಆಗ ನಾವು ಜಗತ್ತಿಗೆ ಮತ್ತು ಭಾರತಕ್ಕೆ ದೃಢವಾದ ಉತ್ತರವನ್ನು ನೀಡುವ ಪರಿಸ್ಥಿತಿಯಲ್ಲಿರುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಕ್ಲೇನ್ ಮುಷ್ತಾಕ್ ಹೇಳಿದ್ದಾರೆ.