ನೋಯ್ಡಾ: ಸರ್ವಾಂಗೀಣ ನಿರ್ವಹಣೆ ತೋರಿದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಸತತ 4ನೇ ಗೆಲುವು ದಾಖಲಿಸಿದೆ. ರೈಡರ್ ಗುಮನ್ ಸಿಂಗ್ (10 ಅಂಕ), ಆಲ್ರೌಂಡರ್ ಆಮೀರ್ ಮೊಹಮದ್ ಜರ್ದನೇಶ್ (8), ಡಿಫೆಂಡರ್ಗಳಾದ ರಿಂಕು (8) ಮತ್ತು ಸೊಂಬಿರ್ (8) ಭರ್ಜರಿ ಆಟದಿಂದ ಯು ಮುಂಬಾ ತಂಡ ತೆಲುಗು ಟೈಟಾನ್ಸ್ ಎದುರು 52-34ರಿಂದ ಜಯ ಸಾಧಿಸಿತು. ಟೈಟಾನ್ಸ್ಗೆ ಇದು 8 ಪಂದ್ಯಗಳಲ್ಲಿ 7ನೇ ಸೋಲಾಗಿದೆ.
ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ಮೊದಲಾರ್ಧದಲ್ಲಿ 24-17ರಿಂದ ಮುನ್ನಡೆ ಸಾಧಿಸಿತು. ನಂತರ ದ್ವೀತಿಯಾರ್ಧದಲ್ಲಿ ತೆಲುಗು ತಂಡವನ್ನು 2 ಬಾರಿ ಆಲೌಟ್ ಮಾಡುವ ಮೂಲಕ ಪ್ರಾಬಲ್ಯ ಸಾಧಿಸಿತು. ಟೂರ್ನಿಯ ದುಬಾರಿ ಆಟಗಾರ ಪವನ್ ಶೆರಾವತ್ ಗೈರಿನಲ್ಲಿ ಪರ್ವೇಶ್ ಬೈನ್ಸ್ವಾಲ್ ತೆಲುಗು ತಂಡವನ್ನು ಮುನ್ನಡೆಸಿದರು.
ದಿನದ ಎರಡನೇ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡ ಆತಿಥೇಯ ಯುಪಿ ಯೋಧಾಸ್ ತಂಡಕ್ಕೆ 35-25ರಿಂದ ಸೋಲುಣಿಸಿತು.