ಕ್ರೀಡೆ

ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ವೇಳಾಪಟ್ಟಿ ಪ್ರಕಟ, ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕಣಕ್ಕೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕರೊನಾ ಕಾಲದಲ್ಲಿ ಮೊದಲ ಪ್ರೊ ಕಬಡ್ಡಿ ಲೀಗ್ ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. ಆತಿಥೇಯ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ಮುಖಾಮುಖಿಯೊಂದಿಗೆ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಡಿಸೆಂಬರ್ 22ರಂದು ಚಾಲನೆ ಸಿಗಲಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೆರಾಟನ್ ಗ್ರಾೃಂಡ್ ಹೋಟೆಲ್ ಮತ್ತು ಕನ್ವೆನ್ಶನ್ ಸೆಂಟರ್‌ನಲ್ಲಿ ಟೂರ್ನಿಯ ಎಲ್ಲ ಪಂದ್ಯಗಳು ನಡೆಯಲಿದ್ದು, ಕರೊನಾ ಭೀತಿಯಿಂದಾಗಿ ಪ್ರೇಕ್ಷಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಮೊದಲ ದಿನದ 2ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್-ತಮಿಳ್ ತಲೈವಾಸ್ ನಡುವೆ ‘ಸದರ್ನ್ ಡರ್ಬಿ’ ಏರ್ಪಡಲಿದೆ. 3ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ ಮತ್ತು ಯುಪಿ ಯೋಧಾ ಮುಖಾಮುಖಿ ಆಗಲಿವೆ. ಕರೊನಾ ಹಾವಳಿಯಿಂದಾಗಿ ಕಳೆದ ವರ್ಷ ಪ್ರೊ ಕಬಡ್ಡಿ ಲೀಗ್ ನಡೆದಿರಲಿಲ್ಲ.

ಒಟ್ಟು 12 ತಂಡಗಳ ಟೂರ್ನಿಯಲ್ಲಿ ಸದ್ಯ ಜನವರಿ ಮಧ್ಯಭಾಗದವರೆಗಿನ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಟೂರ್ನಿಯ 2ನೇ ಭಾಗದ ವೇಳಾಪಟ್ಟಿ ತಡವಾಗಿ ಪ್ರಕಟಗೊಳ್ಳಲಿದೆ. ಲೀಗ್ ಹಂತದಲ್ಲಿ ಎಲ್ಲ ತಂಡಗಳು ತಲಾ 22 ಪಂದ್ಯಗಳನ್ನು ಆಡಲಿದ್ದು, ಸದ್ಯ ತಲಾ 11 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಎಲ್ಲ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಕಾಣಲಿವೆ.

ಸುರಕ್ಷಿತ ಬಯೋ-ಬಬಲ್

ಟೂರ್ನಿಗೆ ಸುರಕ್ಷಿತ ಬಯೋ-ಬಬಲ್ ನಿರ್ಮಿಸುವ ಸಲುವಾಗಿ ಉದ್ಯಾನನಗರಿಯ ಕಂಠೀರವ ಒಳಾಂಗಣ ಕ್ರೀಡಾಂಗಣಕ್ಕೆ ಬದಲಾಗಿ ವೈಲ್ಡ್‌ಫೀಲ್ಡ್‌ನ ಶೆರಾಟನ್ ಗ್ರಾೃಂಡ್ ಹೋಟೆಲ್ ಆವರಣದಲ್ಲಿ ಪಂದ್ಯಗಳು ನಡೆಯಲಿವೆ. ಎಲ್ಲ 12 ತಂಡಗಳ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಅದೇ ತಾಣದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಮತ್ತು ಅಲ್ಲೇ ಆಡಲಿದ್ದಾರೆ. ಇದು ಆಟಗಾರರ ಸುರಕ್ಷತೆಗೆ ನೆರವಾಗಲಿದೆ ಎಂದು ಸಂಘಟಕ ಮಾಷಲ್ ಸ್ಪೋರ್ಟ್ಸ್ ಸಂಸ್ಥೆ ತಿಳಿಸಿದೆ.

ಈ ಬಾರಿ ಟ್ರಿಪಲ್ ಹೆಡರ್ಸ್‌

ಹಿಂದಿನ ಪ್ರೊ ಕಬಡ್ಡಿ ಲೀಗ್‌ಗಳಲ್ಲಿ ಪ್ರತಿದಿನ ಗರಿಷ್ಠ 2 ಪಂದ್ಯಗಳು ನಡೆಯುತ್ತಿದ್ದರೆ ಈ ಬಾರಿ ಟ್ರಿಪಲ್-ಹೆಡರ್ಸ್‌ ಆರಂಭಿಸಲಾಗಿದೆ. ಅಂದರೆ ಕೆಲ ದಿನಗಳಲ್ಲಿ ಗರಿಷ್ಠ 3 ಪಂದ್ಯಗಳು ನಡೆಯಲಿವೆ. ಟೂರ್ನಿಯ ಮೊದಲ 4 ದಿನಗಳಲ್ಲಿ ಟ್ರಿಪಲ್-ಹೆಡರ್ಸ್‌ ನಡೆಯಲಿವೆ. ನಂತರದಲ್ಲಿ ಪ್ರತಿ ಶನಿವಾರದಂದು (ಟ್ರಿಪಲ್-ಪಂಗಾ) 3 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ರಾತ್ರಿ 7.30, 2ನೇ ಪಂದ್ಯ ರಾತ್ರಿ 8.30 ಮತ್ತು 3ನೇ ಪಂದ್ಯ ರಾತ್ರಿ 9.30ಕ್ಕೆ ಆರಂಭಗೊಳ್ಳಲಿವೆ.

ಬೆಂಗಳೂರು ಬುಲ್ಸ್ ಪಂದ್ಯಗಳು

ದಿನಾಂಕ: ಎದುರಾಳಿ, ಆರಂಭ

ಡಿಸೆಂಬರ್ 22: ಯು ಮುಂಬಾ, ರಾತ್ರಿ 7.30

ಡಿಸೆಂಬರ್ 24: ತಮಿಳ್ ತಲೈವಾಸ್, ರಾತ್ರಿ 8.30

ಡಿಸೆಂಬರ್ 26: ಬೆಂಗಾಲ್ ವಾರಿಯರ್ಸ್‌, ರಾತ್ರಿ 8.30

ಡಿಸೆಂಬರ್ 30: ಹರಿಯಾಣ ಸ್ಟೀಲರ್ಸ್‌, ರಾತ್ರಿ 8.30

ಜನವರಿ 1: ತೆಲುಗು ಟೈಟಾನ್ಸ್, ರಾತ್ರಿ 8.30

ಜನವರಿ 2: ಪುಣೇರಿ ಪಲ್ಟಾನ್, ರಾತ್ರಿ 8.30

ಜನವರಿ 6: ಜೈಪುರ ಪಿಂಕ್‌ಪ್ಯಾಂಥರ್ಸ್‌, ರಾತ್ರಿ 8.30

ಜನವರಿ 9: ಯುಪಿ ಯೋಧಾ, ರಾತ್ರಿ 8.30

ಜನವರಿ 12: ದಬಾಂಗ್ ದೆಹಲಿ, ರಾತ್ರಿ 8.30

ಜನವರಿ 14: ಗುಜರಾತ್ ಜೈಂಟ್ಸ್ ರಾತ್ರಿ 8.30

ಜನವರಿ 16: ಪಟನಾ ಪೈರೇಟ್ಸ್, ರಾತ್ರಿ 8.30