ಕ್ರೀಡೆ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್​​ಗೆ ಸೌಥಾಂಪ್ಟನ್ ಪಿಚ್ ಸಿದ್ಧ, ಯಾರಿಗೆ ನೆರವಾಗಲಿದೆ?

ಪ್ರಸಾದ್​ ಶೆಟ್ಟಿಗಾರ್​

ಸೌಥಾಂಪ್ಟನ್: ಭಾರತ-ನ್ಯೂಜಿಲೆಂಡ್ ನಡುವಿನ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯಕ್ಕೆ ಇನ್ನು 3 ದಿನಗಳಷ್ಟೇ ಬಾಕಿ ಇರುವ ವೇಳೆ ಎಲ್ಲರ ಕಣ್ಣು ಇದೀಗ ಏಜಿಯಸ್ ಬೌಲ್ ಕ್ರೀಡಾಂಗಣದ ಪಿಚ್ ಮೇಲೆ ನೆಟ್ಟಿದೆ. ಸೌಥಾಂಪ್ಟನ್ ಕ್ಯುರೇಟರ್ ಸೈಮನ್ ಲೀ ಪ್ರಕಾರ ಪಿಚ್ ವೇಗ ಮತ್ತು ನೆಗೆತದಿಂದ ಕೂಡಿದ್ದು, ಪಂದ್ಯ ಸಾಗಿದಂತೆ ಸ್ಪಿನ್ ಬೌಲರ್‌ಗಳಿಗೂ ನೆರವಾಗಲಿದೆ.

‘ತಟಸ್ಥ ತಾಣದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಸರಳವಾದ ಪಿಚ್ ಸಿದ್ಧಪಡಿಸಲಾಗಿದೆ. ಐಸಿಸಿ ಸೂಚನೆಯಂತೆ ಪಿಚ್ ಸಿದ್ಧಪಡಿಸಲಾಗುತ್ತಿದೆ. ಉಭಯ ತಂಡಗಳ ನಡುವೆ ಸಮಬಲದ ಕಾದಾಟ ನಡೆಯಬಹುದಾದಂಥ ಪಿಚ್ ಇದಾಗಿರಲಿದೆ’ ಎಂದು ಕ್ಯುರೇಟರ್ ಸೈಮನ್ ಲೀ ತಿಳಿಸಿದ್ದಾರೆ. ಪಂದ್ಯ ಶುಕ್ರವಾರದಿಂದ ನಡೆಯಲಿದೆ.

ಮಳೆ ಅಡಚಣೆಯಿಂದಾಗಿ ಪಿಚ್ ಸಿದ್ಧಪಡಿಸುವ ವೇಳೆ ಸಾಕಷ್ಟು ತೊಂದರೆಗಳು ಎದುರಾಗಿದೆ. ಆದರೆ ಪಂದ್ಯಕ್ಕೆ ಮುನ್ನಾದಿನಗಳಲ್ಲಿ ಬಿಸಿಲು ಬಿದ್ದರೆ ಪಿಚ್ ಸುಸಜ್ಜಿತವಾಗಿ ಸಿದ್ಧವಾಗಲಿದೆ. ಇಲ್ಲದಿದ್ದರೆ ರೋಲಿಂಗ್ ಅಗತ್ಯವಾಗಲಿದೆ ಎಂದು ಲೀ ಹೇಳಿದ್ದಾರೆ.

ಉಭಯ ತಂಡಗಳು ಉತ್ತಮ ವೇಗದ ಬೌಲರ್‌ಗಳನ್ನು ಹೊಂದಿದ್ದು, ಅವರಿಗೆ ಪಿಚ್‌ನಲ್ಲಿ ಸಾಕಷ್ಟು ನೆರವು ಸಿಗಲಿದೆ. ಟೆಸ್ಟ್ ಪಂದ್ಯದಲ್ಲೂ ಪ್ರತಿ ಎಸೆತ ರೋಮಾಂಚಕವಾಗಿರಬೇಕೆಂದು ನಾನು ಬಯಸುತ್ತೇನೆ. ಬೌಲರ್-ಬ್ಯಾಟ್ಸ್‌ಮನ್‌ಗಳ ಕೌಶಲ ಪ್ರದರ್ಶನದಿಂದ ಮೇಡನ್ ಓವರ್ ಕೂಡ ಪ್ರೇಕ್ಷಕರಿಗೆ ರಂಜನೆ ಒದಗಿಸುವಂತಾಗಬೇಕು ಎಂದಿದ್ದಾರೆ.

ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಹೊಂದಿರುವುದರಿಂದ ಭಾರತ ತಂಡ ಸ್ಪಿನ್ ವಿಭಾಗದಲ್ಲಿ ತುಸು ಮೇಲುಗೈ ಹೊಂದಿದೆ. 10 ವರ್ಷಗಳ ಹಿಂದೆ ಪಿಚ್ ಮರುನಿರ್ಮಾಣ ಮಾಡುವಾಗ ಸ್ವಲ್ಪ ಮರಳು ಕೂಡ ಮಿಶ್ರಣ ಮಾಡಲಾಗಿದೆ. ಇದರಿಂದ ಪಿಚ್ ಬೇಗನೆ ಒಣಗುವ ಗುಣ ಹೊಂದಿದೆ. ಇದು ಸ್ಪಿನ್ನರ್‌ಗಳಿಗೆ ನೆರವಾಗಬಹುದು ಎಂದು ಲೀ ವಿವರಿಸಿದ್ದಾರೆ.