ಐಚಿ-ನಗೋಯಾ: ದೆಹಲಿಯ ಪಿಂಕಿ ಬಲ್ಹಾರಾ ಏಷ್ಯನ್ ಗೇಮ್ಸ್ ಕುರಾಶ್ (ಮಾರ್ಷಿಯಲ್ ಆರ್ಟ್ಸ್) ಸ್ಪರ್ಧೆಯಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯರೆನಿಸಿದ್ದಾರೆ. 2018ರಲ್ಲಿ ರಜತ ಪದಕ ಜಯಿಸಿದ್ದ ಅವರು ಈ ಬಾರಿ ಮಹಿಳೆಯರ 78 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಒಲಿಸಿಕೊಂಡರು. ಮೊದಲಿಗೆ ಸೆಮಿಫೈನಲ್ಗೇರಿ ಪದಕ ಖಚಿತಪಡಿಸಿಕೊಂಡ ಅವರು, ನಂತರ ಫೈನಲ್ಗೇರುವ ಹೋರಾಟದಲ್ಲಿ ದ. ಕೊರಿಯಾದ ಸುಮಿನ್ ಮೋ ವಿರುದ್ಧ 0-5ರಿಂದ ಪರಾಭವಗೊಂಡು ಕಂಚಿಗೆ ತೃಪ್ತಿಪಟ್ಟರು. 27 ವರ್ಷದ ಪಿಂಕಿ ಏಷ್ಯಾಡ್ನ ಕುರಾಶ್ ಸ್ಪರ್ಧೆಯಲ್ಲಿ ಭಾರತಕ್ಕೆ ಒಟ್ಟಾರೆ 3 ಪದಕ ತಂದರು. 2018ರಲ್ಲಿ ಮಲಪ್ರಭಾ ಜಾಧವ್ ಕಂಚು ಜಯಿಸಿದ್ದರು. ಪಿಂಕಿ ಕ್ವಾರ್ಟರ್ಫೈನಲ್ನಲ್ಲಿ ಕೊರಿಯಾದ ರಮ್ ಲಿಮ್ ವಿರುದ್ಧ 3-0ಯಿಂದ ಜಯಿಸಿದರು. 16ರ ಘಟ್ಟದಲ್ಲಿ ಅವರಿಗೆ ಬೈ ಲಭಿಸಿತ್ತು. ಕ್ವಾರ್ಟರ್ಫೈನಲ್ ವೇಳೆ ಮೊಣಕಾಲಿಗೆ ಗಾಯವಾಗಿದ್ದರಿಂದ ಸೆಮೀಸ್ನಲ್ಲಿ ಸಮರ್ಥ ನಿರ್ವಹಣೆ ತೋರಿಸಲಾಗಲಿಲ್ಲ ಎಂದು ಪಿಂಕಿ ಬೇಸರಿಸಿದರು.
ಹಾಲಿ ಚಾಂಪಿಯನ್ ಜ್ಯೋತಿಗೆ ಶಾಕ್
ಕಂಪೌಂಡ್ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಹಾಲಿ ಚಾಂಪಿಯನ್ ಜ್ಯೋತಿ ಸುರೇಖಾ ವೆನ್ನಾಮ್, ದ. ಕೊರಿಯಾದ 14 ವರ್ಷದ ಕಾಂಗ್ ಯೋನ್ ಸಿಯೋ ಎದುರು ಸೋಲಿನ ಆಘಾತ ಎದುರಿಸಿದರು. ಚಿಕಿತಾ ತನಿಪಾರ್ಥಿ ಹಾಗೂ ಗಣೇಶ್ ಮನಿ ರತ್ನಂ ವೈಯಕ್ತಿಕ ವಿಭಾಗದಲ್ಲಿ ಕ್ವಾರ್ಟರ್ಫೈನಲ್ಗೇರಿದರು. ಕಳೆದ ಆವೃತ್ತಿಯ ವೈಯಕ್ತಿಕ, ತಂಡ, ಮಿಶ್ರ ತಂಡ ವಿಭಾಗದಲ್ಲಿ ಸ್ವರ್ಣ ಜಯಿಸಿದ್ದ ಜ್ಯೋತಿ ಪ್ರಿ ಕ್ವಾರ್ಟರ್ಫೈನಲ್ನಲ್ಲಿ 146 ಅಂಕಗಳಿಸಿದರೆ, ಕಾಂಗ್ ಯೋನ್ ಸಿಯೋ ರ್ಪೆಕ್ಟ್ 150 ಪಾಯಿಂಟ್ ಕಲೆಹಾಕಿದರು. ಚಿಕಿತಾ ಶೂಟ್ಆಫ್ನಲ್ಲಿ ಚೆನ್ ಯು ಸುನ್ ಎದುರು ಜಯ ಸಾಧಿದರೆ, ಇದಕ್ಕೆ ಮುನ್ನ 148-148 ಅಂಕದ ಸಮಬಲ ಸಾಧಿಸಿದ್ದರು. ಪುರುಷರ ವಿಭಾಗದಲ್ಲಿ ಗಣೇಶ್ 149-148 ಅಂತರದಿಂದ ದೇಶಬಾಂಧವ ಸಹಿಲ್ ಎದುರು ಗೆದ್ದು ಕ್ವಾರ್ಟರ್ಫೈನಲ್ ಅರ್ಹತೆ ಗಿಟ್ಟಿಸಿಕೊಂಡರು. ಆಂಧ್ರ ಪ್ರದೇಶದ ಗಣೇಶ್ ಮುಂದಿನ ಸುತ್ತಿನಲ್ಲಿ ಚೀನಾ ತೈಪೆಯ ಚೆನ್ ಚಿಹ್ ಲುನ್ ಸವಾಲು ಎದುರಿಸಲಿದ್ದಾರೆ.
ಟೆನಿಸ್: ಅಂಕಿತಾ-ಋತುಜಾ ಔಟ್
ಟೆನಿಸ್ ಸ್ಪರ್ಧೆಯ ಮಹಿಳಾ ಡಬಲ್ಸ್ನ ಆರಂಭಿಕ ಸುತ್ತಿನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಅನುಭವಿ ಅಂಕಿತಾ ರೈನಾ ಹಾಗೂ ಋತುಜಾ ಬೋಸಲೆ ಜೋಡಿ 7-5, 3-6, 5-10ರಿಂದ ಕಜಾಕ್ಸ್ತಾನದ ಯುಲಿಯಾ ಪುಟಿನ್ಸ್ಟಿವಾ-ಅನ್ನಾ ಡನಿಲಿನಾ ಎದುರು ಟೈ ಬ್ರೇಕರ್ನಲ್ಲಿ ಹೋರಾಟಯುತ ಸೋಲು ಕಂಡರು. ಪುರುಷರ ಸಿಂಗಲ್ಸ್ನಲ್ಲಿ ಭಾರತದ ಅಗ್ರ ಆಟಗಾರ ಸುಮಿತ್ ನಗಾಲ್, ಕೊರಿಯಾದ ಹಾಂಗ್ ಸಿಯೊಂಗ್ಚಾನ್ ವಿರುದ್ಧ ಆರಂಭಿಕ ಸೆಟ್ನಲ್ಲಿ 3-2ರಿಂದ ಮುನ್ನಡೆಯಲ್ಲಿದ್ದಾಗ ಮಳೆ ಅಡಚಣೆ ತಂದಿತು. ಇದರಿಂದ ಪಂದ್ಯವನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಇತ್ತೀಚೆಗೆ ನಡೆದ ಡೇವಿಸ್ ಕಪ್ನ ಎರಡು ಸಿಂಗಲ್ಸ್ ಪಂದ್ಯದಲ್ಲಿ ಕೊರಿಯಾ ಆಟಗಾರನ ವಿರುದ್ಧವೇ ನಗಾಲ್ ಸೋಲು ಅನುಭವಿಸಿದ್ದರು.