ಪ್ಯಾರಿಸ್: ಸೆರ್ಬಿಯಾದ ತಾರೆ ನೊವಾಕ್ ಜೋಕೊವಿಕ್ ಎಟಿಪಿ ರ‌್ಯಾಂಕಿಂಗ್‌ನಲ್ಲಿ 6ನೇ ಬಾರಿಗೆ ವರ್ಷಾಂತ್ಯದ ನಂ. 1 ಪಟ್ಟ ಸಂಪಾದಿಸಿದ್ದಾರೆ. ಈ ಮೂಲಕ ತಮ್ಮ ಬಾಲ್ಯದ ಹೀರೋ ಪೀಟ್ ಸಾಂಪ್ರಸ್ ದಾಖಲೆ ಸರಿಗಟ್ಟಿದ್ದಾರೆ.
ಅಮೆರಿಕದ ದಿಗ್ಗಜ ಸಾಂಪ್ರಸ್ 1993ರಿಂದ 1998ರವರೆಗೆ ಸತತ 6 ವರ್ಷಗಳ ಕಾಲ ಈ ಸಾಧನೆ ಮಾಡಿದ್ದರೆ, ಜೋಕೊವಿಕ್ ಈ ಹಿಂದೆ 2011, 2012, 2014, 2015, 2018ರಲ್ಲೂ ವರ್ಷಾಂತ್ಯದ ನಂ. 1 ಆಗಿದ್ದರು. ಹಾಲಿ ವಿಶ್ವ ನಂ. 2 ರಾಫೆಲ್ ನಡಾಲ್ ಮುಂದಿನ ವಾರದ ಸೋಫಿಯಾ ಟೂರ್ನಿಯಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ 33 ವರ್ಷದ ಜೋಕೊವಿಕ್‌ಗೆ ವರ್ಷಾಂತ್ಯದ ನಂ. 1 ಪಟ್ಟ ಖಚಿತಗೊಂಡಿದೆ.
17 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಜೋಕೋ (294 ವಾರ), 286 ವಾರಗಳ ಕಾಲ ನಂ. 1 ಪಟ್ಟದಲ್ಲಿದ್ದ ಸಾಂಪ್ರಸ್ ದಾಖಲೆಯನ್ನು ಈಗಾಗಲೆ ಮುರಿದಿದ್ದು, ಮುಂದಿನ ವರ್ಷ ಮಾರ್ಚ್ 8ರವರೆಗೂ ಈ ಸ್ಥಾನ ಕಾಯ್ದುಕೊಂಡರೆ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ಅವರ 310 ವಾರಗಳ ದಾಖಲೆಯನ್ನೂ ಮುರಿಯಲಿದ್ದಾರೆ.
ಕಳೆದ 17 ವರ್ಷಗಳಲ್ಲಿ 16 ಬಾರಿ ಜೋಕೋ, ನಡಾಲ್ ಮತ್ತು ಫೆಡರರ್ ಅವರಲ್ಲೊಬ್ಬರೇ ವರ್ಷಾಂತ್ಯದ ನಂ. 1 ಪಟ್ಟ ಅಲಂಕರಿಸಿದ್ದಾರೆ. 2016ರಲ್ಲಿ ಮಾತ್ರ ಬ್ರಿಟನ್‌ನ ಆಂಡಿ ಮರ‌್ರೆ ನಂ. 1 ಆಗಿದ್ದರು.