ಕ್ರೀಡೆ

ಬಾಂಗ್ಲಾದೇಶ ಎದುರು ಗೆಲುವು ಸಾಧಿಸಿದರೂ ಪಾಕ್‌ಗೆ ಮುಜುಗರ ತಂದ ಫ್ಲಡ್‌ಲೈಟ್

ಲಾಹೋರ್: ಆರಂಭಿಕ ಇಮಾಮ್ ಉಲ್ ಹಕ್ (78 ರನ್, 84 ಎಸೆತ, 5 ಬೌಂಡರಿ, 4 ಸಿಕ್ಸರ್) ಹಾಗೂ ವೇಗಿ ಹ್ಯಾರೀಸ್ ರೌಫ್ (19ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಪಾಕಿಸ್ತಾನ ಸೂಪರ್-4 ಹಂತದ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 7 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ.

ಗದ್ದಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ ಶಕೀಬ್ (53 ರನ್, 57 ಎಸೆತ, 7 ಬೌಂಡರಿ) ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಮುಶ್ಫೀಕರ್ ರಹೀಂ (64 ರನ್, 87 ಎಸೆತ, 5 ಬೌಂಡರಿ) ಜತೆಯಾಟ ನೆರವಿನಿಂದ ಸುಸ್ಥಿಯಲ್ಲಿತ್ತು, ಬಳಿಕ 18 ರನ್ ಅಂತರದಲ್ಲಿ ಕೊನೇ ಐದು ವಿಕೆಟ್ ಕಳೆದುಕೊಂಡು 38.4 ಓವರ್‌ಗಳಲ್ಲಿ 192 ರನ್‌ಗಳಿಗೆ ಕುಸಿಯಿತು. ಪ್ರತಿಯಾಗಿ ಇಮಾಮ್ ಉಲ್ ಹಕ್ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಮೊಹಮದ್ ರಿಜ್ವಾನ್ (63*ರನ್, 79 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಲದಿಂದ 39.3 ಓವರ್‌ಗಳಲ್ಲಿ 3 ವಿಕೆಟ್‌ಗೆ 194 ರನ್‌ಗಳಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿತು.

ಬಾಂಗ್ಲಾದೇಶ: 38.4 ಓವರ್‌ಗಳಲ್ಲಿ 193 (ಮೊಹಮದ್ ನಯೀಮ್ 20, ಲಿಟನ್ 16, ಶಕೀಬ್ 53, ಮುಶ್ಫೀಕರ್ 64, ಶಮೀಮ್ 16, ಅಫ್ೀ 12, ಹ್ಯಾರೀಸ್ ರೌಫ್ 19ಕ್ಕೆ4, ನಸೀಮ್ ಷಾ 34ಕ್ಕೆ 3).

ಪಾಕಿಸ್ತಾನ: 39.3 ಓವರ್‌ಗಳಲ್ಲಿ 3 ವಿಕೆಟ್‌ಗೆ 194 (ಖರ್ 20, ಇಮಾಮ್ 78, ಬಾಬರ್ 17, ರಿಜ್ವಾನ್ 63*, ಅಘಾ ಸಲ್ಮಾನ್ 12*, ಶೋರಿುಲ್ 24ಕ್ಕೆ1, ಟಸ್ಕಿನ್ 32ಕ್ಕೆ 1).

ಕೈ ಕೊಟ್ಟ ಲೈಟ್: ಮಳೆಗಾಲದ ಸಮಯದಲ್ಲಿ ಲಂಕಾದಲ್ಲಿ ಏಷ್ಯಾಕಪ್ ಏಕದಿನ ಟೂರ್ನಿ ಆಯೋಜಿಸಿರುವುದಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನಿರ್ಧಾರವನ್ನು ವಿರೋಧಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದ ವೇಳೆ ತೀವ್ರ ಮುಖಭಂಗ ಎದುರಿಸಿದೆ. ಬಾಂಗ್ಲಾದೇಶ ನೀಡಿದ 193 ರನ್‌ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 15 ರನ್‌ಗಳಿಸಿದಾಗ ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದ ಆರು ಫ್ಲಡ್‌ಲೈಟ್‌ಗಳಲ್ಲಿ ಒಂದು ದಿಢೀರ್ ಆಫ್ ಆಯಿತು. ನಂತರ ಕೆಲ ಹೊತ್ತಿನಲ್ಲಿ ಸಮಸ್ಯೆ ಬಗೆಹರಿಸಲಾಯಿತು. ಇದರಿಂದಾಗಿ 20 ನಿಮಿಷಗಳ ಕಾಲ ಪಂದ್ಯವನ್ನು ನಿಲ್ಲಿಸಲಾಗಿತ್ತು. ಗದ್ದಾಫಿ ಕ್ರೀಡಾಂಗಣದ ಕರೆಂಟ್ ಬಿಲ್ ಪಾವತಿಸದ ಕಾರಣ ಕರೆಂಟ್ ಕಟ್ ಮಾಡಲಾಗಿದೆ ಎಂದು ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿದೆ.