ನವದೆಹಲಿ: ಮಾರ್ಚ್ 09ರಂದು ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಭಾರತ ತಂಡವು ವಿಜೇತರಾಗಿ ಹೊರಹೊಮ್ಮಿದ್ದು, 12 ವರ್ಷಗಳ ಬಳಿಕ ಮಿನಿ ವಿಶ್ವಕಪ್ಗೆ ಮುತ್ತಿಟ್ಟಿದೆ. ಟೂರ್ನಿ ಮುಗಿದು ಮೂರು ದಿನಗಳಾದರು ಪಾಕಿಸ್ತಾನದ ಗೋಳು ಮಾತ್ರ ಯಾಕೋ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಅದ್ಕಕೆ ಪೂರಕವಾಗಿ ಇದೀಗ ಹೊಸ ಆರೋಪವೊಂದನ್ನು ಮಾಡುವ ಮೂಲಕ ಪಾಕ್ ಕ್ರಿಕೆಟ್ ಮಂಡಳಿಯು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಆರ್ಥಿಕ ಸಂಕಷ್ಟ ಉಗ್ರವಾದದಿಂದ ನರಳಿರುವ ಪಾಕಿಸ್ತಾನವು 29 ವರ್ಷಗಳ ಬಳಿಕ ಐಸಿಸಿ ಟೂರ್ನಿಯೊಂದಕ್ಕೆ (Champions Trophy) ಆತಿಥ್ಯ ವಹಿಸಿತ್ತು. ಹಾಲಿ ಚಾಂಪಿಯನ್ಸ್ ಪಟ್ಟದೊಂದಿಗೆ ಟೂರ್ನಿಯ ಆತಿಥ್ಯ ವಹಿಸಿದ್ದ ಪಾಕಿಸ್ತಾನವು ಒಂದು ಪಂದ್ಯವನ್ನು ಗೆಲ್ಲಲಾಗದೆ ಹೀನಾಯವಾಗಿ ಹೊರಬಿದ್ದಿತ್ತು. ಇದಾದ ಬಳಿಕ ಭಾರತದ ವಿರುದ್ಧ ಪಿಚ್ ಲಾಭ ಸೇರಿದಂತೆ ಇನ್ನಿತರೆ ಆರೋಪ ಮಾಡಿದ್ದ ಪಾಕ್ ಇದೀಗ ಐಸಿಸಿಗೆ ದೂರೊಂದನ್ನು ನೀಡಿದ್ದು, ಐಸಿಸಿ ಇದಕ್ಕೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ (Champions Trophy) ಸಮಾರೋಪ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ಪಾಕ್ ಕ್ರಿಕೆಟ್ ಮಂಡಳಿಯು ಐಸಿಸಿಗೆ ದೂರು ನೀಡಿದ್ದು, ಸದ್ಯ ಈ ವಿಚಾರ ಕ್ರೀಡಾ ವಲಯದಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ವೇದಿಕೆ ಮೇಲೆ ಐಸಿಸಿ ಅಧ್ಯಕ್ಷ ಜಯ್ ಶಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಸೇರಿದಂತೆ ಐಸಿಸಿಯ ಕೆಲ ಸದಸ್ಯರು ಕಾಣಿಸಿಕೊಂಡಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಯಾವೊಬ್ಬ ಸದಸ್ಯರು ಸಹ ವೇದಿಕೆ ಮೇಲಿರಲಿಲ್ಲ.
ಆತಿಥ್ಯ ವಹಿಸಿದ್ದ ರಾಷ್ಟ್ರದ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ಮೊಹ್ಸಿನ್ ನಖ್ವಿ ಅವರು ಗೈರಾಗಿದ್ದು ಕೂಡ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು. ಆದರೆ, ಕೇಳಿ ಬಂದಿರುವ ಮಾಹಿತಿ ಪ್ರಕಾರ ಪಿಸಿಬಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಫೈನಲ್ ಪಂದ್ಯ ವೀಕ್ಷಿಸಲು ದುಬೈಗೆ ಪ್ರಯಾಣಿಸಿರಲಿಲ್ಲವೆಂದು ತಿಳಿದು ಬಂದಿದ್ದು, ಅವರ ಬದಲು ಪಿಸಿಬಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಮೈರ್ ಅಹ್ಮದ್ ಸೈಯದ್ ಅವರನ್ನು ಕಳುಹಿಸಿಕೊಡಲಾಗಿತ್ತು.
ಪಂದ್ಯದ ನಿರ್ದೇಶಕರಾಗಿದ್ದವರು ಸುಮೈರ್ ಅಹ್ಮದ್ ಸೈಯದ್ ಸ್ಥಳದಲ್ಲಿ ಹಾಜರಿದ್ದರೂ ಅವರನ್ನು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲ ಎಂಬ ಆರೋಪವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಿದ್ದು, ಈ ಸಂಬಂಧ ಐಸಿಸಿಗೆ ದೂರು ನೀಡಿದೆ. ಇದಲ್ಲದೆ ವಿವರಣೆ ನೀಡಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕಾಗಿ ಪಿಸಿಬಿ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ರೀತಿ ನಿರ್ಲಕ್ಷಿಸಿರುವುದು ನಮಗೆ ಆಘಾತವನ್ನುಂಟು ಮಾಡಿದೆ ಎಂದು ಕಿಡಿಕಾರಿದೆ. ಆದರೆ, ಐಸಿಸಿ ಪಿಸಿಬಿಯ ಯಾವುದೇ ಆರೋಪಕ್ಕಾಗಲಿ, ದೂರಿಗಾಗಲಿ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.