ಹೈದರಾಬಾದ್: ನಿರ್ಣಾಯಕ ಹೋರಾಟದಲ್ಲಿ ಭರ್ಜರಿ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಬೆಂಗಳೂರು ರ್ಯಾಪ್ಟರ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಸತತ 3ನೇ ಬಾರಿಗೆ ಸೆಮಿಫೈನಲ್ಗೇರಿತು. ಜಿಎಂಸಿ ಬಾಲಯೋಗಿ ಒಳಾಂಗಣ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆರಂಭಿಕ ಹಿನ್ನಡೆ ನಡುವೆಯೂ ಬೆಂಗಳೂರು ತಂಡ 5-0ಯಿಂದ ಅವಧ್ ವಾರಿಯರ್ಸ್ ಎದುರು ಗೆಲುವು ದಾಖಲಿಸಿತು.
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯ ಮೊದಲ ಹಣಾಹಣಿ ಪುರುಷರ ಡಬಲ್ಸ್ ವಿಭಾಗದಲ್ಲಿ ವೀರೋಚಿತ ಸೋಲು
ಕಂಡ ಬೆಂಗಳೂರು ತಂಡ 0-1ರಿಂದ ಹಿನ್ನಡೆ ಅನುಭವಿಸಿತು. ಬಳಿಕ ನಡೆದ ಪುರುಷರ ಸಿಂಗಲ್ಸ್ನ ಮೊದಲ ಹಣಾಹಣಿಯಲ್ಲಿ ಬೆಂಗಳೂರು ತಂಡದ ಫ್ರಾನ್ಸ್ ಆಟಗಾರ ವಿಶ್ವ ನಂ.34 ಬ್ರಿಸ್ ಲೆವೆರ್ಡೆಸ್ 15-9, 15-9 ನೇರ ಗೇಮ್ಳಿಂದ ಅಜಯ್ ಜಯರಾಮ್ನ್ನು ಮಣಿಸಿದರು. ಇದು ಅವಧ್ ತಂಡಕ್ಕೆ ಟ್ರಂಪ್ ಪಂದ್ಯವಾಗಿದ್ದರಿಂದ ಬೆಂಗಳೂರು ತಂಡ 1-0ಯಿಂದ ಮುನ್ನಡೆ ಪಡೆಯಿತು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ.2 ಚೀನಾ ತೈಪೆಯ ತೈ ಜು ಯಿಂಗ್ 15-12, 15-12 ರಿಂದ ಬೀವಿನ್ ಜಾಂಗ್ರನ್ನು ಮಣಿಸಿದರು. ಈ ಮೂಲಕ 2-0ಯಿಂದ ಮುನ್ನಡೆ ಸಾಧಿಸಿದ ಬೆಂಗಳೂರು ತಂಡದ ಸೆಮೀಸ್ ಸ್ಥಾನ ಖಚಿತಗೊಂಡಿತು. ಪುರುಷರ ಸಿಂಗಲ್ಸ್ ವಿಭಾಗದ 2ನೇ ಹಣಾಹಣಿಯನ್ನು ಟ್ರಂಪ್ ಘೋಷಣೆಯೊಂದಿಗೆ ಆಡಿದ ನಾಯಕ ಸಾಯಿ ಪ್ರಣೀತ್ 15-11, 15-13ರಿಂದ ವಾಂಗ್ ವಿಂಗ್ ಕೀ ವಿನ್ಸೆಂಟ್ರನ್ನು ಮಣಿಸುವ ಮೂಲಕ ಗೆಲುವಿನ ಅಂತರವನ್ನು 4-0ಗೆ ಹಿಗ್ಗಿಸಿದರು. ಅಂತಿಮ ಮಿಶ್ರ ಡಬಲ್ಸ್ನಲ್ಲೂ ರ್ಯಾಪ್ಟರ್ಸ್ ಗೆಲುವು ದಾಖಲಿಸಿತು.
ನಾರ್ತ್ಈಸ್ಟರ್ನ್ ವಾರಿಯರ್ಸ್, ಚೆನ್ನೈ ಸೂಪರ್ಸ್ಟಾರ್ಸ್ ಮತ್ತು ಪುಣೆ 7 ಏಸಸ್ ತಂಡಗಳು ಈಗಾಗಲೆ ಸೆಮಿಫೈನಲ್ ಸ್ಥಾನ ಖಚಿತ ಪಡಿಸಿಕೊಂಡಿದ್ದವು. ಸೆಮಿಫೈನಲ್ ಪಂದ್ಯಗಳು ಫೆಬ್ರವರಿ 7 ಮತ್ತು 8ರಂದು ಹೈದರಾಬಾದ್ನಲ್ಲೇ ನಡೆಯಲಿವೆ. ಫೈನಲ್ ಪಂದ್ಯ ಫೆಬ್ರವರಿ 9ರಂದು ನಡೆಯಲಿದೆ. -ಪಿಟಿಐ/ಏಜೆನ್ಸೀಸ್