ಕೋಲ್ಕತ: ಐಪಿಎಲ್ ವೇಳೆ ಕರೊನಾದಿಂದ ಸಂಕಷ್ಟದಲ್ಲಿರುವವರಿಗೆ ಆಕ್ಸಿಜನ್ ಪೂರೈಕೆಗಾಗಿ ಆರ್ಥಿಕ ನೆರವು ನೀಡುವ ಮೂಲಕ ಭಾರತೀಯರ ಮನಗೆದ್ದಿದ್ದ ಆಸ್ಟ್ರೆಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್, ಟೂರ್ನಿ ಸ್ಥಗಿತಗೊಂಡ ಬಳಿಕ ತವರಿನತ್ತ ಹೊರಟಿದ್ದಾರೆ. ಸದ್ಯ ಮಾಲ್ಡೀವ್ಸ್ನಲ್ಲಿ ಕ್ವಾರಂಟೈನ್ ಆಗಿರುವ ಕೋಲ್ಕತ ನೈಟ್ರೈಡರ್ಸ್ ಆಟಗಾರ ಕಮ್ಮಿನ್ಸ್ಗೆ ಅಮ್ಮಂದಿರ ದಿನದಂದೇ ಶುಭ ಸುದ್ದಿಯೊಂದು ಲಭಿಸಿದೆ. ಅವರ ಗೆಳತಿ ಹಾಗೂ ಭಾವಿ ಪತ್ನಿ ಬೆಕಿ ಬೋಲ್ಟನ್ ಅಮ್ಮನಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಕಮ್ಮಿನ್ಸ್ ಈ ವರ್ಷ ಅಪ್ಪನಾಗಲಿದ್ದಾರೆ ಎಂದು ಕೆಕೆಆರ್ ತಂಡ ಟ್ವಿಟರ್ನಲ್ಲಿ ಭಾನುವಾರ ಪ್ರಕಟಿಸಿದೆ. ಜತೆಗೆ ಕಮ್ಮಿನ್ಸ್-ಬೋಲ್ಟನ್ ಜೋಡಿಗೆ ಶುಭಾಶಯಗಳನ್ನೂ ತಿಳಿಸಿದೆ.
ನನ್ನ ಖುಷಿಯನ್ನು ಇನ್ನೆಂದೂ ಮುಚ್ಚಿಟ್ಟುಕೊಳ್ಳಲಾರೆ. ಬೇಬಿ ಬೋಸ್ಟನ್ ಕಮ್ಮಿನ್ಸ್ ಈ ವರ್ಷ ನಮ್ಮನ್ನು ಕೂಡಿಕೊಳ್ಳಲಿದೆ ಎಂದು ಬೆಕಿ ಬೋಸ್ಟನ್ ಕೂಡ ಪೋಸ್ಟ್ ಮಾಡಿದ್ದಾರೆ. ದೀರ್ಘಕಾಲದ ಗೆಳತಿ ಬೋಸ್ಟನ್ ಜತೆಗೆ ಕಮ್ಮಿನ್ಸ್ ಕಳೆದ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.