ಕ್ರೀಡೆ

ರೋಹಿತ್​, ಕೊಹ್ಲಿ, ಪಂತ್​ಗಿಂತ ಈ ಆಟಗಾರನನ್ನು ಕಂಡರೆ ನಮಗೆಲ್ಲ ಭಯ ಅಂದ್ರು ಆಸಿಸ್ ಕ್ಯಾಪ್ಟನ್ ಕಮ್ಮಿನ್ಸ್ | Pat Cummins

Pat Cummins : ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಮ್​ ಇಂಡಿಯಾವನ್ನು ಎದುರಿಸಲು ಆಸ್ಟ್ರೇಲಿಯಾ ಸಜ್ಜಾಗಿದೆ. ಕಳೆದೆರಡು ಬಾರಿ ತಮ್ಮದೇ ನೆಲದಲ್ಲಿ ಭಾರತದ ವಿರುದ್ಧ ಸರಣಿ ಸೋತಿರುವ ಆಸೀಸ್, ಈ ಬಾರಿ ಯಾವ ಬೆಲೆ ತೆತ್ತಾದರೂ ಟ್ರೋಫಿಗೆ ಮುತ್ತಿಕ್ಕುವ ಸಂಕಲ್ಪ ತೊಟ್ಟಿದೆ. ಈ ಪ್ರತಿಷ್ಠಿತ ಸರಣಿಯ ಭಾಗವಾಗಿ ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ನವೆಂಬರ್ 22 ರಿಂದ ಆರಂಭವಾಗಲಿದೆ.

ಬಾರ್ಡರ್-ಗವಾಸ್ಕರ್ ಟೂರ್ನಿ ಹಿನ್ನೆಲೆಯಲ್ಲಿ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮ್ಮಿನ್ಸ್, ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಟೀಮ್​ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬಗ್ಗೆ ಪ್ರಶಂಸೆಯ ಸುರಿಮಳೆಗೈದರು. ನಾನು ಬುಮ್ರಾ ಅವರ ದೊಡ್ಡ ಅಭಿಮಾನಿ ಎಂದು ಕಮ್ಮಿನ್ಸ್ ಹೇಳಿದರು. ಅಂದಹಾಗೆ ಬುಮ್ರಾಗೆ ಇದು ಮೂರನೇ ಬಾರ್ಡರ್-ಗವಾಸ್ಕರ್ ಟ್ರೋಫಿ ಎಂಬುದು ಗಮನಾರ್ಹ.

ನಾನು ಜಸ್ಪ್ರೀತ್ ಬುಮ್ರಾ ಅವರ ದೊಡ್ಡ ಅಭಿಮಾನಿ. ಅವರು ಅದ್ಭುತ ಬೌಲರ್. ಅವರು ಈ ಸರಣಿಯಲ್ಲಿ ಭಾರತ ತಂಡಕ್ಕೆ ಪ್ರಮುಖ ಆಟಗಾರರಾಗುತ್ತಾರೆ. ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವವೂ ಬುಮ್ರಾ ಅವರಿಗಿದೆ. ನಮ್ಮ ತಂಡಕ್ಕೆ ಬುಮ್ರಾ ಭಯವಿದೆ ಎಂದು ಎಂದು ಕಮ್ಮಿನ್ಸ್ ಹೇಳಿದ್ದಾರೆ.

ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಹೀಗಾಗಿ ಬುಮ್ರಾ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಸೀಸ್ ನೆಲದಲ್ಲಿ ಟೆಸ್ಟ್​ನಲ್ಲಿ ಬುಮ್ರಾ ಉತ್ತಮ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇದುವರೆಗೆ 7 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ ಖಾತೆಯಲ್ಲಿ 32 ವಿಕೆಟ್​ಗಳಿವೆ. (ಏಜೆನ್ಸೀಸ್​)