ಪ್ಯಾರಿಸ್: ವಿಭಿನ್ನ, ವಿಶಿಷ್ಟ ರೀತಿಯಲ್ಲಿ ಯಶಸ್ವಿಯಾಗಿ ಒಲಿಂಪಿಕ್ಸ್ ಆಯೋಜಿಸಿದ ಪ್ರೇಮನಗರಿ ಪ್ಯಾರಿಸ್ ಈಗ 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ಆತಿಥ್ಯಕ್ಕೆ ಸಜ್ಜಾಗಿದೆ. ಕಾನ್ಕಾರ್ಡ್ ಚೌಕದಲ್ಲಿ ಬುಧವಾರ ನಡೆಯಲಿರುವ ಅದ್ದೂರಿ ಆರಂಭೋತ್ಸವದೊಂದಿಗೆ ಅಂಗವಿಕಲ ಕ್ರೀಡಾಪಟುಗಳ ಜಾಗತಿಕ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. ಗುರುವಾರದಿಂದ 11 ದಿನಗಳ ಕಾಲ 22 ಕ್ರೀಡೆಗಳಲ್ಲಿ 549 ಸ್ವರ್ಣ ಪದಕಗಳಿಗೆ ಸ್ಪರ್ಧೆಗಳು ನಡೆಯಲಿವೆ. 169 ದೇಶಗಳಿಂದ ಸುಮಾರು 4,400 ಪ್ಯಾರಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪ್ಯಾರಿಸ್ 3 ಬಾರಿ (1900, 1924, 2024) ಒಲಿಂಪಿಕ್ಸ್ ಆತಿಥ್ಯ ವಹಿಸಿದೆ. ಆದರೆ ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್ಗೆ ಆತಿಥ್ಯ ವಹಿಸಲಿದೆ.
ಜೀವನಸ್ಫೂರ್ತಿಯ ಸಾಧಕರ ಸ್ಪರ್ಧೆ: ಒಲಿಂಪಿಕ್ಸ್ನಲ್ಲಿ ಗೆದ್ದವರು ಚಾಂಪಿಯನ್ನರಾದರೆ, ಪ್ಯಾರಾಲಿಂಪಿಕ್ಸ್ನಲ್ಲಿ ಸ್ಪರ್ಧಿಸುವವರೆಲ್ಲರೂ ಚಾಂಪಿಯನ್ಸ್. ಅಂಗವೈಕಲ್ಯದ ಹಿನ್ನಡೆಯನ್ನು ಮೆಟ್ಟಿನಿಂತು ಜೀವನದ ಹೋರಾಟದಲ್ಲಿ ಗೆದ್ದವರಿಗೆ ಕೂಟದಲ್ಲಿ ಸಿಗುವ ಪದಕ, ಅವರ ಸಾಧನೆಯ ಕಿರೀಟದ ಮೇಲೆ ಮತ್ತೊಂದು ಗರಿ ಆಗಿರುತ್ತದೆ.
ದಿನ: 12
ಕ್ರೀಡೆ: 22
ದೇಶ: 169
ಸ್ವರ್ಣ ಪಣಕ್ಕೆ: 549
ಕ್ರೀಡಾಪಟುಗಳು: 4,400
ಅದ್ದೂರಿ ಆರಂಭೋತ್ಸವ
ಪ್ಯಾರಿಸ್ ಒಲಿಂಪಿಕ್ಸ್ನಂತೆ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭವೂ ಸ್ಟೇಡಿಯಂನಿಂದ ಹೊರಗೆ ನಡೆಯಲಿದೆ. ಪ್ರೇಮನಗರಿಯ ಪ್ರಮುಖ ಸಾರ್ವಜನಿಕ ಚೌಕ ಆಗಿರುವ "ಪ್ಲೇಸ್ ಡ ಲಾ ಕಾನ್ಕಾರ್ಡ್'ನಲ್ಲಿ ಆರಂಭೋತ್ಸವ ನಡೆಯಲಿದೆ. ಮಾನವನ ದೇಹದ ವಿಷಯದೊಂದಿಗೆ ಇತಿಹಾಸ ಮತ್ತು ಅದರ ವಿರೋಧಾಭಾಸಗಳ ಸುತ್ತ ಸಮಾರಂಭದ ಸಾಂಸತಿಕ ಕಾರ್ಯಕ್ರಮ ನಡೆಯಲಿದೆ. ಕ್ರೀಡಾಪಟುಗಳ ಪಥಸಂಚಲನ 1.9 ಕಿಲೋಮೀಟರ್ ಉದ್ದದ ಅವೆನ್ಯೂ ಡೆಸ್ ಚಾಂಪ್ಸ್ ರಸ್ತೆಯಿಂದ ಶುರುವಾಗಿ ಕಾನ್ಕಾರ್ಡ್ ಚೌಕ ತಲುಪಲಿದೆ. ತಾತ್ಕಾಲಿಕ ಸ್ಟ್ಯಾಂಡ್ನಲ್ಲಿ 65 ಸಾವಿರ ಪ್ರೇಕ್ಷಕರು ಹಾಜರಿರಲಿದ್ದಾರೆ. ಒಲಿಂಪಿಕ್ಸ್ ಉದ್ಘಾಟನಾ-ಸಮಾರೋಪ ಸಮಾರಂಭವನ್ನು ನಿರ್ದೇಶಿಸಿದ ಥಾಮಸ್ ಜೋಲ್ಲಿ ಅವರೇ ಪ್ಯಾರಾಲಿಂಪಿಕ್ಸ್ ಆರಂಭೋತ್ಸವದ ನಿರ್ದೇಶಕರಾಗಿದ್ದಾರೆ. 3 ಗಂಟೆಗಳ ಕಾಲ ಆರಂಭೋತ್ಸವ ನಡೆಯಲಿದೆ. ಸಮಾರಂಭದಲ್ಲಿ ಭಾಗವಹಿಸಲಿರುವ ಪ್ರಮುಖ ತಾರೆಯರ ಹೆಸರನ್ನು ಸಂಟಕರು ಬಹಿರಂಗಪಡಿಸಿಲ್ಲ. ಅಂಗವಿಕಲ ಕಲಾವಿದರೂ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎನ್ನಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ವೇಳೆ ಬೆಳಗಲಾಗಿದ್ದ, ರಾತ್ರಿಯ ವೇಳೆ ಆಕಾಶದಲ್ಲಿ ಹಾರಾಡುವಂಥ ಕ್ರೀಡಾಜ್ಯೋತಿಯನ್ನೇ ಪ್ಯಾರಾಲಿಂಪಿಕ್ಸ್ನಲ್ಲೂ ಬೆಳಗಿಸಲಾಗುತ್ತದೆ. ಸೆಪ್ಟೆಂಬರ್ 8ರಂದು ಸಮಾರೋಪ ಸಮಾರಂಭ ಸ್ಟೇಡ್ ಡಿ ಫ್ರಾನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.
*ಆರಂಭ: ರಾತ್ರಿ 11.30
*ನೇರಪ್ರಸಾರ: ಜಿಯೋಸಿನಿಮಾ, ಡಿಡಿ ಸ್ಪೋರ್ಟ್ಸ್
ಭಾರತದ ಬೃಹತ್ ತಂಡ
ಪ್ಯಾರಾಲಿಂಪಿಕ್ಸ್ 1960ರಲ್ಲಿ ಆರಂಭಗೊಂಡಿತ್ತು. 1984ರಿಂದ ಭಾರತ ಪ್ರತಿ ಆವೃತ್ತಿಯಲ್ಲೂ ಭಾಗವಹಿಸುತ್ತ ಬಂದಿದೆ. ಭಾರತ ಈ ಬಾರಿ 52 ಪುರುಷ ಮತ್ತು 32 ಮಹಿಳೆಯರ ಸಹಿತ 84 ಪ್ಯಾರಾ ಕ್ರೀಡಾಪಟುಗಳ ಬೃಹತ್ ತಂಡದೊಂದಿಗೆ ಕಣಕ್ಕಿಳಿಯಲಿದೆ. 2021ರ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ 54 ಕ್ರೀಡಾಪಟುಗಳ ಭಾಗವಹಿಸಿದ್ದು ಭಾರತದ ಈ ಹಿಂದಿನ ಗರಿಷ್ಠವಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಜಾವೆಲಿನ್ ಎಸೆತಗಾರ ಸುಮಿತ್ ಆಂತಿಲ್ ಮತ್ತು ಶಾಟ್ಪುಟ್ ಪಟು ಭಾಗ್ಯಶ್ರೀ ಜಾಧವ್ ಭಾರತ ತಂಡದ ಧ್ವಜಧಾರಿಗಳಾಗಿದ್ದಾರೆ.
25 ಪದಕ ಗೆಲುವಿನ ಗುರಿ
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 10ಕ್ಕಿಂತ ಅಧಿಕ ಪದಕ ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿದಿದ್ದ ಭಾರತ 6 ಪದಕಗಳಿಗೆ ತೃಪ್ತಿಪಟ್ಟು, ನಿರೀೆಗೆ ತಕ್ಕ ನಿರ್ವಹಣೆ ತೋರಲು ವಿಲವಾಗಿತ್ತು. ಆದರೆ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳು 25 ಪದಕ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ. ಜತೆಗೆ ಒಲಿಂಪಿಕ್ಸ್ ನಿರಾಸೆಯನ್ನು ಪ್ಯಾರಾಲಿಂಪಿಕ್ಸ್ನಲ್ಲಿ ಮರೆಯಾಗಿಸುವ ಹಂಬಲದಲ್ಲಿದ್ದಾರೆ. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ 19 ಪದಕ (5 ಚಿನ್ನ, 8 ಬೆಳ್ಳಿ, 6 ಕಂಚು) ಗೆದ್ದಿದ್ದು ಭಾರತದ ಇದುವರೆಗೆ ಶ್ರೇಷ್ಠ ನಿರ್ವಹಣೆ ಎನಿಸಿದೆ.
ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್ನಲ್ಲಿ ಭಾರತ ಬಲಿಷ್ಠ
ಭಾರತ ತಂಡ ಪ್ಯಾರಾಲಿಂಪಿಕ್ಸ್ನಲ್ಲಿ ಅಥ್ಲೆಟಿಕ್ಸ್ ಮತ್ತು ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಹೆಚ್ಚಿನ ಪದಕ ಗೆಲುವಿನ ನಿರೀಕ್ಷೆ ಹೊಂದಿದೆ. ಅಥ್ಲೆಟಿಕ್ಸ್ನಲ್ಲಿ 38 ಮತ್ತು ಬ್ಯಾಡ್ಮಿಂಟನ್ನಲ್ಲಿ 13 ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ. ಜಾವೆಲಿನ್ ಥ್ರೋ ಮತ್ತು ಶಾಟ್ಪುಟ್ನ ವಿವಿಧ ವಿಭಾಗಗಳಲ್ಲೇ ಭಾರತ ತಲಾ 10 ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ. ಶೂಟಿಂಗ್, ಆರ್ಚರಿ ಮತ್ತು ಟೇಬಲ್ ಟೆನಿಸ್ ಭಾರತ ಪದಕ ಗೆಲುವಿನ ನಿರೀಕ್ಷೆ ಹೊಂದಿರುವ ಇತರ ಪ್ರಮುಖ ಕ್ರೀಡೆಗಳಾಗಿವೆ.
ಕರ್ನಾಟಕದ ನಾಲ್ವರು ಕಣಕ್ಕೆ
ಪ್ಯಾರಿಸ್ನಲ್ಲಿ ಕರ್ನಾಟಕದ ನಾಲ್ವರು ಪ್ಯಾರಾ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಪವರ್ಲಿಫ್ಟಿಂಗ್ನಲ್ಲಿ ಸಕಿನಾ ಖತುನ್, ಅಥ್ಲೆಟಿಕ್ಸ್ನಲ್ಲಿ ರತಾ ರಾಜು ಮತ್ತು ಶೂಟಿಂಗ್ನಲ್ಲಿ ಶ್ರೀಹರ್ಷ ದೇವರೆಡ್ಡಿ ಸ್ಪರ್ಧಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಆಗಿರುವ ರಾಜ್ಯದ ಸುಹಾಸ್ ಯತಿರಾಜ್ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಚಿನ್ನದ ನಿರೀಕ್ಷೆ ಹೊಂದಿದ್ದಾರೆ. ರಾಜ್ಯದ ರ್ಮಾನ್ ಬಾಷಾ (ಪವರ್ಲಿಫ್ಟಿಂಗ್) ಕೋಚ್ ಮತ್ತು ರಾಹುಲ್ ಬಾಲಕೃಷ್ಣ ರತಾಗೆ ಗೈಡ್-ಕೋಚ್ ಆಗಿ ಪ್ಯಾರಿಸ್ಗೆ ತೆರಳಿದ್ದಾರೆ.
ನ್ಯೂನತೆಗೆ ತಕ್ಕಂತೆ ವರ್ಗೀಕರಣ
ಪ್ಯಾರಾ ಕ್ರೀಡೆಯಲ್ಲಿ ಕ್ರೀಡಾಪಟುಗಳ ಅಂಗ ನ್ಯೂನತೆಗೆ ತಕ್ಕಂತೆ ಅವರನ್ನು ವರ್ಗೀಕರಿಸಲಾಗುತ್ತದೆ. ಇದರಿಂದಾಗಿ ಕೆಲವು ಕ್ರೀಡೆಗಳಲ್ಲಿ ಒಂದೇ ವಿಭಾಗದಲ್ಲಿ ಹಲವು ವರ್ಗೀಕರಣದೊಂದಿಗೆ ಪ್ರತ್ಯೇಕವಾದ ಸ್ಪರ್ಧೆಗಳು ನಡೆಯುತ್ತವೆ. ಉದಾಹರಣೆಗೆ ಪ್ಯಾರಾ ಬ್ಯಾಡ್ಮಿಂಟನ್ನಲ್ಲೇ ಸಿಂಗಲ್ಸ್ ವಿಭಾಗದಲ್ಲಿ 6 ಭಿನ್ನ ವರ್ಗೀಕರಣದೊಂದಿಗೆ ಸ್ವರ್ಣ ಪದಕಕ್ಕೆ ಸ್ಪರ್ಧೆ ನಡೆಯುತ್ತವೆ. ಪುರುಷರ 100 ಮೀ. ಓಟದಲ್ಲಿ ಒಟ್ಟು 16 ಮತ್ತು ಮಹಿಳಾ ವಿಭಾಗದಲ್ಲಿ 13 ವರ್ಗೀಕರಣದೊಂದಿಗೆ ಸ್ಪರ್ಧೆಗಳು ನಡೆಯುತ್ತವೆ.