ಕ್ರೀಡೆ

Paris Olympic: 100 ಮೀಟರ್ ಓಟದ ಥ್ರಿಲ್ಲರ್​ ಗೆದ್ದ ಅಮೆರಿಕದ ನೋವಾ ಲೈಲ್ಸ್; ಹೀಗಿತ್ತು ಫೋಟೋಫಿನಿಷ್​ ಲೆಕ್ಕಾಚಾರ...

ಪ್ಯಾರಿಸ್​: ಒಲಿಂಪಿಕ್ಸ್​ ಇತಿಹಾಸದಲ್ಲೇ ಅತ್ಯಂತ ರೋಚಕವಾದ ಪುರುಷರ 100 ಮೀಟರ್​ ಓಟದ ಫೈನಲ್​ನಲ್ಲಿ ಅಮೆರಿಕದ ನೋವಾ ಲೈಲ್ಸ್​ ಕೇವಲ 0.005 ಸೆಕೆಂಡ್​ ಅಂತರದಿಂದ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಈ ಮೂಲಕ 27 ವರ್ಷದ ನೋವಾ ಲೈಲ್ಸ್​ ಪ್ಯಾರಿಸ್​ ಒಲಿಂಪಿಕ್ಸ್​ನ ಅತಿವೇಗದ ಓಟಗಾರರಾಗಿ ಹೊರಹೊಮ್ಮಿದ್ದಾರೆ. ಜಮೈಕಾದ ಕಿಶೇನ್​ ಥಾಂಪ್ಸನ್​ ಒಂದು ಸೆಕೆಂಡಿನ ಐದು ಸಾವಿರನೇ ಅಂತರದಿಂದ ಹಿಂದುಳಿದು ರಜತ ಪದಕಕ್ಕೆ ತೃಪ್ತಿಪಟ್ಟರು.

ಸ್ಟೇಡ್​ ಡಿ ಫ್ರಾನ್ಸ್​ನಲ್ಲಿ ಭಾನುವಾರ ರಾತ್ರಿ ನೇರಳೆ ಟ್ರ್ಯಾಕ್​ನಲ್ಲಿ ನಡೆದ ಫೈನಲ್​ನಲ್ಲಿ ಇದೇ ಮೊದಲ ಬಾರಿಗೆ ಎಲ್ಲ 8 ಓಟಗಾರರು 10 ಸೆಕೆಂಡ್​ನೊಳಗೆ ಸ್ಪರ್ಧೆ ಮುಗಿಸಿದರು. ವಿಶ್ವ ಚಾಂಪಿಯನ್​ ನೋವಾ ಲೈಲ್ಸ್​ ಮತ್ತು ಥಾಂಪ್ಸನ್​ 9.79 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿದರು. ಆಗ ಫೋಟೋಫಿನಿಷ್​ ಲೆಕ್ಕಾಚಾರದಲ್ಲಿ ಲೈಲ್ಸ್​ 9.784 ಸೆಕೆಂಡ್​ ಮತ್ತು ಥಾಂಪ್ಸನ್​ 9.789 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿದ್ದಾರೆ ಎಂದು ತೀರ್ಪು ಹೊರಬಿದ್ದಿತು. ಬೆನ್ನಲ್ಲೇ ಲೈಲ್ಸ್​ ಚೊಚ್ಚಲ ಒಲಿಂಪಿಕ್ಸ್​ ಸ್ವರ್ಣ ಪದಕದ ಸಂಭ್ರಮ ಆಚರಿಸಿದರು.

ಅಮೆರಿಕದ ಮತ್ತೋರ್ವ ಓಟಗಾರ ಫ್ರೆಡ್​ ಕೆರ್ಲಿ (9.81) ಕಂಚಿನ ಪದಕ ಜಯಿಸಿದರೆ, ದಣ ಆಫ್ರಿಕಾದ ಅಕಾನಿ ಸಿಂಬಿನೆ (9.82ಸೆ.) ಕೇವಲ ಕೇವಲ 0.001 ಸೆಕೆಂಡ್​ನಿಂದ ಪದಕ ವಂಚಿತರಾಗಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಟೋಕಿಯೊದಲ್ಲಿ ಅಚ್ಚರಿಯ ರೀತಿಯಲ್ಲಿ ಚಿನ್ನ ಗೆದ್ದು ಪ್ಯಾರಿಸ್​ನಲ್ಲಿ ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿದ ಇಟಲಿಯ ಮಾರ್ಸೆಲ್​ ಜೇಕಬ್ಸ್​ (9.85 ಸೆ) 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಬೋತ್ಸ್​ವಾನಾದ ಲೆಟ್ಸಿಲೆ ಟೆಬೊಗೊ (9.86 ಸೆ) 6ನೇ ಸ್ಥಾನ ಪಡೆದರು. ಅಮೆರಿಕದ 3ನೇ ಸ್ಪರ್ಧಿ ಕೆನ್ನಿ ಬೆಡ್ನಾರೆಕ್​ (9.88 ಸೆ) 7ನೇ ಸ್ಥಾನ ಪಡೆದರೆ, ದಿಗ್ಗಜ ಉಸೇನ್​ ಬೋಲ್ಟ್​ ಉತ್ತರಾಧಿಕಾರಿ ಎಂದೇ ಬಣ್ಣಿಸಲ್ಪಟ್ಟಿರುವ ಮತ್ತು ಬಹುತೇಕ ಅವರಂತೆಯೇ ಕಾಣಿಸುವ ಜಮೈಕಾದ 23 ವರ್ಷದ ಒಬ್ಲಿಕ್​ ಸೆವಿಲ್ಲೆ (9.91 ಸೆ) ಕೊನೇ ಸ್ಥಾನದೊಂದಿಗೆ ನಿರಾಸೆ ಅನುಭವಿಸಿದರು.

ಓಟದಲ್ಲಿ ಲೈಲ್ಸ್​ ಉತ್ತಮ ಆರಂಭ ಕಾಣಲಿಲ್ಲ. ಆದರೆ 40 ಮೀ. ಬಳಿಕ ವೇಗ ವೃದ್ಧಿಸಿಕೊಂಡ ಲೈಲ್ಸ್​, ಅರ್ಧ ರೇಸ್​ ಮುಗಿದಾಗಲೂ ಕೊನೇ ಸ್ಥಾನದಲ್ಲೇ ಇದ್ದರು. ಆದರೆ ಕೊನೇ 10 ಮೀಟರ್​ನಲ್ಲಿ ಒಮ್ಮೆಲೆ ಮುನ್ನುಗ್ಗಿದ ಲೈಲ್ಸ್​ ಫೋಟೋಫಿನಿಷ್​ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದು ವಿಶೇಷವಾಗಿತ್ತು. ಸ್ಪರ್ಧೆ ಮುಗಿದು 10 ಸೆಕೆಂಡ್​ಗೂ ಅಧಿಕ ಸಮಯ ಕಳೆದರೂ ಯಾರು ಗೆದ್ದರು ಎಂಬ ಗೊಂದಲ ಓಟಗಾರರು ಮತ್ತು ಪ್ರೇಕ್ಷಕರನ್ನು ಕಾಡಿತು. ಅಂತಿಮವಾಗಿ ಸ್ಟೇಡಿಯಂನ ದೈತ್ಯಪರದೆಯಲ್ಲಿ ವಿಜೇತರ ಹೆಸರು ಪ್ರಕಟಿಸಲಾಯಿತು.

ಒಲಿಂಪಿಕ್ಸ್​ನಲ್ಲಿ ಅತ್ಯಂತ ವಿಶೇಷ ಮಹತ್ವದ 100 ಮೀ. ಓಟವನ್ನು ವೀಸಲು 69 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಸ್ಟೇಡ್​ ಡಿ ್ರಾನ್ಸ್​ ಸ್ಟೇಡಿಯಂ ಕಿಕ್ಕಿರಿದು ತುಂಬಿತ್ತು. ಟೋಕಿಯೊ ಗೇಮ್ಸ್​ನಲ್ಲಿ 100 ಮೀ. ಓಟದಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಲೈಲ್ಸ್​, 200 ಮೀ. ಓಟದಲ್ಲಿ ಕಂಚಿನ ಪದಕ ಗೆಲ್ಲಲಷ್ಟೇ ಶಕ್ತರಾಗಿದ್ದರು.

*20: ಅಮೆರಿಕ 20 ವರ್ಷಗಳ ಬಳಿಕ ಒಲಿಂಪಿಕ್ಸ್​ನ 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತು. 2004ರ ಅಥೆನ್ಸ್​ ಗೇಮ್ಸ್​ನಲ್ಲಿ ಕೊನೆಯದಾಗಿ ಜಸ್ಟಿನ್​ ಗ್ಯಾಟ್ಲಿನ್​ ಈ ಸಾಧನೆ ಮಾಡಿದ್ದರು.

*1: ಒಲಿಂಪಿಕ್ಸ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ಮೀ. ಓಟದ ಫೈನಲ್​ನಲ್ಲಿ ಎಲ್ಲ 8 ಓಟಗಾರರು 10 ಸೆಕೆಂಡ್​ನೊಳಗೆ ಸ್ಪರ್ಧೆ ಮುಗಿಸಿದರು.

ಫೋಟೋಫಿನಿಷ್​ ಫಲಿತಾಂಶ ಲೆಕ್ಕಾಚಾರ...

ಅಥ್ಲೆಟಿಕ್ಸ್​ ಸ್ಪರ್ಧೆಯಲ್ಲಿ ಫೋಟೋಫಿನಿಷ್​ ಆದಾಗ, ಸ್ಪರ್ಧೆಯ ವಿಡಿಯೋ ಚಿತ್ರವನ್ನು ಸೆಕೆಂಡ್​ಗೆ 2,000 ಚಿತ್ರಗಳಂತೆ ವಿಂಗಡಿಸಿ ಲಿತಾಂಶ ಪರಿಶೀಲಿಸಲಾಗುತ್ತದೆ. ಹೀಗೆ ನೋಡುವಾಗ ಯಾವ ಓಟಗಾರರ ದೇಹದ ಭಾಗ ಮೊದಲಿಗೆ ಫಿನಿಷ್​ ಗೆರೆಯನ್ನು ದಾಟಿದೆ ಎಂದು ಪರಾಮರ್ಶೆ ನಡೆಸಲಾಗುತ್ತದೆ. ಇಲ್ಲಿ ಥಾಮ್ಸನ್​ ಕಾಲು ಮೊದಲಿಗೆ ಫಿನಿಷ್​ ಗೆರೆಯನ್ನು ದಾಟಿದಂತೆ ಕಾಣಿಸಿದರೂ ಅದು ಲೆಕ್ಕಕ್ಕೆ ಬರುವುದಿಲ್ಲ. ಬದಲಿಗೆ ಓಟಗಾರರ ತಲೆ, ಎದೆ, ಹೊಟ್ಟೆ, ಸೊಂಟ ಮತ್ತು ಬೆನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಲೈಲ್ಸ್​ ತಲೆ ಮೊದಲಿಗೆ ಫಿನಿಷ್​ ಗೆರೆ ಸ್ಪರ್ಶಿಸಿದ್ದರಿಂದ ಅವರನ್ನು ವಿಜೇತರನ್ನಾಗಿ ಘೋಷಿಸಲಾಯಿತು.

ಅಸ್ತಮಾ ಗೆದ್ದು ಬೀಗಿದ ಲೈಲ್ಸ್​!

ಅಸ್ತಮಾ, ಅಲರ್ಜಿಗಳು, ಡಿಸ್ಲೆಕ್ಸಿಯಾ, ಆತಂಕ ಮತ್ತು ಖಿನ್ನತೆಯಿಂದ ನಾನು ಬಳಲಿದ್ದೆ. ಆದರೆ ಈಗ ಅದೆಲ್ಲವನ್ನೂ ಮೀರಿಸಿ ನನಗೆ ಬೇಕಾದುದನ್ನು ಸಾಧಿಸಿರುವೆ ಎಂದು ನೋವಾ ಲೈಲ್ಸ್​ 100 ಮೀ. ಓಟದ ಗೆಲುವಿನ ಬಳಿಕ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. ಅವರು ಪ್ಯಾರಿಸ್​ನಲ್ಲಿ ಇನ್ನೂ 2 ಚಿನ್ನ ಗೆಲ್ಲುವ ಅವಕಾಶ ಹೊಂದಿದ್ದು, 200 ಮೀ. ಮತ್ತು 4/100 ಮೀ. ರಿಲೇಯಲ್ಲೂ ಕಣಕ್ಕಿಳಿಯಲಿದ್ದಾರೆ.

*9.91: ಪ್ಯಾರಿಸ್​ನಲ್ಲಿ 9.91 ಸೆಕೆಂಡ್​ಗಳಲ್ಲಿ ಓಡಿದ ಸೆವಿಲ್ಲೆ ಕೊನೇ ಸ್ಥಾನಕ್ಕೆ ತೃಪ್ತಿಪಟ್ಟರು. 1988ರಲ್ಲಿ 9.92 ಸೆಕೆಂಡ್​ಗಳಲ್ಲಿ ಓಡಿದ್ದ ಕಾರ್ಲ್​ ಲೂಯಿಸ್​ ಚಿನ್ನ ಗೆದ್ದಿದ್ದರು. ಇದೇ ಈ ಸಲದ 100 ಮೀ. ಓಟದ ಶ್ರೇಷ್ಠ ಗುಣಮಟ್ಟಕ್ಕೆ ಸಾಕ್ಷಿ ಎನಿಸಿದೆ.