ಕ್ರೀಡೆ

'ನೀವು ಕ್ರಿಕೆಟ್ ಬದಲಿಗೆ ಸೋಷಿಯಲ್ ಮೀಡಿಯಾದಲ್ಲೇ ಹೆಚ್ಚು ಸಮಯ ಕಳಿತೀರಿ': ಮಾಜಿ ಸ್ಟಾರ್​ಗೆ ಪಂತ್​ ಟಕ್ಕರ್​

ನವದೆಹಲಿ: ಅಪಘಾತದಲ್ಲಿ ಕಾಲಿಗೆ ಪೆಟ್ಟು ತಿಂದು, ಬಹುದಿನಗಳ ವಿಶ್ರಾಂತಿ ಬಳಿಕ ಈಗ ಸಂಪೂರ್ಣವಾಗಿ ಗುಣಮುಖರಾಗಿರುವ ಡೆಲ್ಲಿ ಕ್ಯಾಪಿಟಲ್ಸ್​ ಸ್ಟಾರ್​ ಆಟಗಾರ ರಿಷಬ್​ ಪಂತ್​, ಇತ್ತೀಚೆಗೆ ನಡೆದ ಪಾಡ್​ಕಾಸ್ಟ್​​​ನಲ್ಲಿ ಕೊಟ್ಟ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಅದರಲ್ಲೂ ಪಂತ್ ಕೊಟ್ಟ ಹೇಳಿಕೆಯಂತೂ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.

ಭಾರತೀಯ ಕ್ರಿಕೆಟ್ ತಂಡ ವಿಕೆಟ್‌ ಕೀಪರ್, ಎಡಗೈ ಬ್ಯಾಟ್ಸ್​ಮನ್​ ರಿಷಭ್ ಪಂತ್, ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗರಾದ ಆಡಮ್ ಗಿಲ್‌ಕ್ರಿಸ್ಟ್ ಮತ್ತು ಮೈಕೆಲ್ ವಾನ್ ಅವರೊಂದಿಗೆ ಕ್ಲಬ್ ಪ್ರೈರೀ ಫೈರ್ ವೀಡಿಯೊ ಪಾಡ್‌ಕಾಸ್ಟ್‌ನಲ್ಲಿ ಜತೆಗೂಡಿ, ಕ್ರಿಕೆಟ್​ ಜಗತ್ತಿನ ಹಲವು ವಿಚಾರಗಳನ್ನು ಚರ್ಚಿಸುತ್ತಿದ್ದರು. ಮಾತಿನ ಭರಾಟೆಯಲ್ಲಿ ಮಾಜಿ ಇಂಗ್ಲೆಂಡ್ ನಾಯಕನನ್ನು ಪಂತ್ ಟ್ರೋಲ್​ ಮಾಡಿದ್ದು, ಸದ್ಯ ಕ್ರಿಕೆಟ್​ ಅಭಿಮಾನಿಗಳ ನಗುವಿಗೆ ಕಾರಣವಾಗಿದೆ.

"ನನಗೆ ಒಂದು ಕುತೂಹಲವಿದೆ, ನೀವು ವಾನ್ ಜತೆ ಗೇಮ್​ನಲ್ಲಿದ್ದರೆ ಹೇಗೆ ಅವರನ್ನು ಮತ್ತಷ್ಟು ಆಟದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತೀರಿ" ಎಂದು ಗಿಲ್‌ಕ್ರಿಸ್ಟ್ ಪಂತ್ ಅವರಿಗೆ ಪಾಡ್​ಕಾಸ್ಟ್​ನಲ್ಲಿ ಕೇಳಿದರು. ಈ ಪ್ರಶ್ನೆಗೆ ರಿಷಭ್ ಉತ್ತರಿಸುವ ಮುನ್ನ ಪ್ರತಿಕ್ರಿಯಿಸಿದ ವ್ಯಾನ್, "ಹೆಚ್ಚು ಹೇಳಬೇಕಾಗಿಲ್ಲ" ಎಂದು ಕಿರುನಗೆಯೊಂದಿಗೆ ಹೇಳಿದರು.

"ನೀವು ನಿಮ್ಮ ಕ್ರಿಕೆಟ್ ಆಡುವ ಬದಲಿಗೆ ಸೋಷಿಯಲ್ ಮೀಡಿಯಾದತ್ತ ಹೆಚ್ಚು ಗಮನಹರಿಸುತ್ತಿದ್ದೀರಿ ಎನ್ನುತ್ತಿದ್ದೆ" ಎಂದು ಪಂತ್ ಉತ್ತರಿಸಿದ್ದಾರೆ. ಇದಕ್ಕೆ ಗಿಲ್ಕ್ರಿಸ್ಟ್, "ನೀವು ಸರಿಯಾಗಿ ಹೇಳಿದ್ದೀರಿ" ಎಂದು ಒಪ್ಪಿಕೊಂಡರು. ಸದ್ಯ ಈ ಮೂವರ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನಸೆಳೆದಿದೆ. ಸತತ 15 ತಿಂಗಳ ವಿಶ್ರಾಂತಿ ಬಳಿಕ ಇದೀಗ ಮಾರ್ಚ್​​ 22ರಂದು ಪ್ರಾರಂಭವಾಗಲಿರುವ ಐಪಿಎಲ್​ 2024ರ ಆವೃತ್ತಿ ಮೂಲಕ ಪಂತ್​ ಕ್ರಿಕೆಟ್ ಅಬಿಮಾನಿಗಳನ್ನು ಮನರಂಜಿಸಲು ತಂಡಕ್ಕೆ ಮರಳಲಿದ್ದಾರೆ,(ಏಜೆನ್ಸೀಸ್).