ಕ್ರೀಡೆ

ಮಿಂಚಿದ ಪಂತ್​, ಪಾಂಡ್ಯ; ಟಿ20 ವಿಶ್ವಕಪ್​ಗೆ ಭಾರತ ಗೆಲುವಿನ ಅಭ್ಯಾಸ

ನ್ಯೂಯಾರ್ಕ್​: ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​ (53 ರನ್​, 32 ಎಸೆತ, 4 ಬೌಂಡರಿ, 4 ಸಿಕ್ಸರ್​) ಬಿರುಸಿನ ಬ್ಯಾಟಿಂಗ್​ ಮತ್ತು ಬೌಲರ್​ಗಳ ಸಂಟಿತ ದಾಳಿ ನೆರವಿನಿಂದ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯ ಏಕೈಕ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 60 ರನ್​ಗಳಿಂದ ಗೆಲುವು ಸಾಧಿಸಿದೆ. ಈ ಆಲ್ರೌಂಡ್​ ನಿರ್ವಹಣೆಯೊಂದಿಗೆ ಭಾರತ ಭರ್ಜರಿ ಅಭ್ಯಾಸ ನಡೆಸಿದ್ದು, ಜೂನ್​ 5ರಂದು ಐರ್ಲೆಂಡ್​ ವಿರುದ್ಧ ನಡೆಯಲಿರುವ ಮೊದಲ ಪಂದ್ಯದ ಸವಾಲಿಗೆ ಸಜ್ಜಾಗಿದೆ.

ನಾಸೌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಭಾರತ, ಪಂತ್​ ಹಾಗೂ ಸೂರ್ಯಕುಮಾರ್​ (31) ನಡೆಸಿದ ಜತೆಯಾಟದ ಬಲದಿಂದ 5 ವಿಕೆಟ್​ಗೆ 182 ರನ್​ಗಳಿಸಿತು. ಪ್ರತಿಯಾಗಿ 41 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ತತ್ತರಿಸಿದ ಬಾಂಗ್ಲಾ, ಅಂತಿಮವಾಗಿ 9 ವಿಕೆಟ್​ಗೆ 122 ರನ್​ ಗಳಿಸಲಷ್ಟೇ ಶಕ್ತವಾಯಿತು. ಎಡಗೈ ವೇಗಿ ಅರ್ಷದೀಪ್​ (12ಕ್ಕೆ 2) ಆರಂಭದಲ್ಲೇ 2 ವಿಕೆಟ್​ ಕಬಳಿಸಿ ಮಿಂಚಿದರು.

ಪಂತ್​ ಅರ್ಧಶತಕದಾಸರೆ: ನಾಯಕ ರೋಹಿತ್​ ಶರ್ಮ (23) ಜತೆಯಾಗಿ ಇನಿಂಗ್ಸ್​ ಆರಂಭಿಸಿದ ಸಂಜು ಸ್ಯಾಮ್ಸನ್​ (1) ನಿರಾಸೆ ಮೂಡಿಸಿದರು. ಪಂತ್​ ಸ್ಫೋಟಕ ಬ್ಯಾಟಿಂಗ್​ನಿಂದ 32 ಎಸೆತದಲ್ಲಿ ಅರ್ಧಶತಕ ಸಿಡಿಸಿ ನಿವೃತ್ತಿಗೊಂಡರು. ಶಿವಂ ದುಬೆ (14) ರನ್​ಗಳಿಸಲು ಪರದಾಡಿದರು. ಇದರ ಬೆನ್ನಲ್ಲೇ ಸೂರ್ಯಕುಮಾರ್​ ಸಹ ಔಟಾದರು. ಕೊನೆಯಲ್ಲಿ ಉಪನಾಯಕ ಹಾರ್ದಿಕ್​ ಪಾಂಡ್ಯ (40* ರನ್​, 23 ಎಸೆತ, 2 ಬೌಂಡರಿ, 4 ಸಿಕ್ಸರ್​) ಬಿರುಸಿನ ಬ್ಯಾಟಿಂಗ್​ ಮೂಲಕ ತಂಡದ ಮೊತ್ತ ಏರಿಸಿದರು. ಕೊನೇ 5 ಓವರ್​ಗಳಲ್ಲಿ ಭಾರತ 52 ರನ್​ ದೋಚಿತು.

ಆಡದ ಕೊಹ್ಲಿ: ಶುಕ್ರವಾರವಷ್ಟೇ ತಂಡ ಕೂಡಿಕೊಂಡಿರುವ ವಿರಾಟ್​ ಕೊಹ್ಲಿ ಅಭ್ಯಾಸ ಪಂದ್ಯದಿಂದ ಹೊರಗುಳಿದರು. ಯಶಸ್ವಿ ಜೈಸ್ವಾಲ್​ ಕೂಡ ಬ್ಯಾಟಿಂಗ್​ಗೆ ಇಳಿಯಲಿಲ್ಲ.

ಭಾರತ: 5 ವಿಕೆಟ್​ಗೆ 182 (ರೋಹಿತ್​ 23, ಸ್ಯಾಮ್ಸನ್​ 1, ಪಂತ್​ 52, ಸೂರ್ಯಕುಮಾರ್​ 31, ಶಿವಂ ದುಬೆ 14, ಹಾರ್ದಿಕ್​ ಪಾಂಡ್ಯ 40, ಜಡೇಜಾ 4, ಮಹಮುದುಲ್ಲಾ 16ಕ್ಕೆ 1, ತನ್ವೀರ್​ 29ಕ್ಕೆ 1, ಮಹಿದಿ 22ಕ್ಕೆ 1). ಬಾಂಗ್ಲಾದೇಶ: 9 ವಿಕೆಟ್​ಗೆ 122 (ತಂಜಿದ್​ 17, ಲಿಟನ್​ ದಾಸ್​ 6, ಮಹಮುದುಲ್ಲಾ 40, ಶಕೀಬ್​ 28, ಅರ್ಷದೀಪ್​ 12ಕ್ಕೆ 2, ದುಬೆ 13ಕ್ಕೆ 2, ಬುಮ್ರಾ 12ಕ್ಕೆ 1, ಹಾರ್ದಿಕ್​ 30ಕ್ಕೆ 1, ಸಿರಾಜ್​ 17ಕ್ಕೆ 1, ಅಕ್ಷರ್​ 10ಕ್ಕೆ 1).