ಕ್ರೀಡೆ

ಡೆಲ್ಲಿ ತಂಡದಿಂದ ಪಂತ್ ಹೊರಕ್ಕೆ?: ಐಪಿಎಲ್‌ನ ಯಶಸ್ವಿ ತಂಡ ಸೇರಲು ಆಸಕ್ತಿ!

ನವದೆಹಲಿ: ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಸಿದ ಬೆನ್ನಲ್ಲೇ ನಾಯಕ ರಿಷಭ್ ಪಂತ್ ಸಹ ತಂಡ ತೊರೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಇದರ ಬಗ್ಗೆ ಡೆಲ್ಲಿ ್ರಾಂಚೈಸಿ ಅಥವಾ ರಿಷಭ್ ಪಂತ್ ಅಧಿಕೃತ ಮಾಹಿತಿ ನೀಡಿಲ್ಲ.

2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಪ್ರತಿ ಫ್ರಾಂಚೈಸಿಯು ತನ್ನ ತಂಡಗಳಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆಯಿದೆ. ಜತೆಗೆ ನಾಯಕತ್ವದಲ್ಲೂ ಬದಲಾವಣೆ ನಡೆಸುವ ಸಾಧ್ಯತೆಗಳಿವೆ. ಇದಕ್ಕೆ ಪುಷ್ಠಿ ನೀಡುವಂತೆ ಏಳು ಆವೃತ್ತಿಗಳಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ ಪಾಂಟಿಂಗ್ ಅವರನ್ನು ಡೆಲ್ಲಿ ತಂಡದ ಕೋಚ್ ಸ್ಥಾನನಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ಭಾರತದ ಮಾಜಿ ಕ್ರಿಕೆಟಿಗರು ಅಥವಾ ತಂಡದ ನಿರ್ದೇಶಕರಾಗಿರುವ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ನೂತನ ತರಬೇತುದಾರನಾಗಿ ನೇಮಿಸಲು ್ರಾಂಚೈಸಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮೆಗಾ ಹರಾಜಿಗೂ ಮುನ್ನ ನಾಯಕ ರಿಷಭ್ ಪಂತ್ ಕೂಡ ಡೆಲ್ಲಿ ತಂಡ ತೊರೆಯಲಿದ್ದು, ಡೆಲ್ಲಿ ್ರಾಂಚೈಸಿ ಹೊಸ ನಾಯಕನ ಹುಡುಕಾಟದಲ್ಲಿದೆ. ಜತೆಗೆ ಪಂತ್ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಲು ಆಸಕ್ತಿ ಹೊಂದಿದ್ದಾರೆ ಎಂಬ ಚರ್ಚೆ ಹುಟ್ಟಿಕೊಂಡಿದೆ.

ಭೀಕರ ಅಪಘಾತದ ನಂತರ ಒಂದೂವರೆ ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದ ಪಂತ್, 2024ರ ಐಪಿಎಲ್ ಟೂರ್ನಿಯೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು. ಆದರೆ ಡೆಲ್ಲಿ ತಂಡ ಪ್ಲೇಆಫ್ ಪ್ರವೇಶಿಸಲು ವಿಲವಾಯಿತು. ಕಳಪೆ ಪ್ರದರ್ಶನದಿಂದ ಪಾಂಟಿಂಗ್ ಸ್ಥಾನದಿಂದ ಕೆಳಗಿಳಿಸಲಾಯಿತು, ಆದರೆ ಡೆಲ್ಲಿ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ಪಂತ್ ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಇದೆ. ಇದಲ್ಲದೇ ರಿಷಬ್ ಪಂತ್ ಮತ್ತೊಂದು ತಂಡಕ್ಕೆ ಹೋಗುವ ಸಾಧ್ಯತೆಯೂ ಕಡಿಮೆ ಇದೆ. ಏಕೆಂದರೆ, ಅವರಿಗೆ ಇನ್ನೊಂದು ತಂಡವನ್ನು ಮುನ್ನಡೆಸುವ ಅವಕಾಶ ಸಿಗುವುದೇ ಎಂಬ ಅನುಮಾನವಿದೆ.