ದೋಹಾ: ಭಾರತದ ಅನುಭವಿ ಕ್ಯೂ ಆಟಗಾರ ಹಾಗೂ ಕನ್ನಡಿಗ ಪಂಕಜ್ ಆಡ್ವಾಣಿ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ಅವರು 26ನೇ ಬಾರಿ ವಿಶ್ವ ಚಾಂಪಿಯನ್ ಪಟ್ಟವೇರಿದ ವಿಶಿಷ್ಟ ಸಾಧನೆ ಮಾಡಿದ್ದಾರೆ. ಭಾರತದಲ್ಲಿ ಬೇರೆ ಯಾವ ಕ್ರೀಡಾಪಟು ಕೂಡ ಇದಕ್ಕಿಂತ ಅರ್ಧದಷ್ಟು ಸಲವೂ ವಿಶ್ವ ಕಿರೀಟ ಗೆದ್ದುಕೊಂಡ ದೃಷ್ಟಾಂತವಿಲ್ಲ. ಏಕದಿನ ವಿಶ್ವಕಪ್ನಲ್ಲಿ ಭಾರತಕ್ಕೆ ವಿಶ್ವ ಚಾಂಪಿಯನ್ ಪಟ್ಟ ತಪ್ಪಿದ ನಿರಾಸೆಯನ್ನೂ ಪಂಕಜ್ ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಿದ್ದಾರೆ.
ಬೆಂಗಳೂರಿನ ತಾರೆ ಪಂಕಜ್ ಆಡ್ವಾಣಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ದೇಶಬಾಂಧವ ಸೌರವ್ ಕೊಠಾರಿ ವಿರುದ್ಧ 1000&416 ಅಂತರದಿಂದ ಗೆಲುವು ದಾಖಲಿಸಿದರು. ಕಳೆದ ವರ್ಷ ಕೌಲಾಲಂಪುರದಲ್ಲಿ ನಡೆದ ಅಂಕ ಮಾದರಿಯ ಟೂರ್ನಿಯಲ್ಲೂ ಆಡ್ವಾಣಿ, ಕೊಠಾರಿ ವಿರುದ್ಧವೇ ಗೆದ್ದು 25ನೇ ವಿಶ್ವ ಕಿರೀಟ ಒಲಿಸಿಕೊಂಡಿದ್ದರು. 20 ವರ್ಷಗಳ ಹಿಂದೆ ಸ್ನೂಕರ್ನಲ್ಲಿ ಮೊಟ್ಟಮೊದಲ ಬಾರಿ ವಿಶ್ವ ಕಿರೀಟ ಗೆದ್ದಿದ್ದ ಪಂಕಜ್, 2005ರಲ್ಲಿ ಬಿಲಿಯರ್ಡ್ಸ್ನಲ್ಲಿ ಮೊದಲ ಬಾರಿ ವಿಶ್ವ ಚಾಂಪಿಯನ್ ಪಟ್ಟವೇರಿದ್ದರು.
ದೀರ್ಘ ಪ್ರಕಾರದಲ್ಲಿ ಅವರಿಗೆ ಇದು 9ನೇ ವಿಶ್ವ ಪ್ರಶಸ್ತಿಯಾಗಿದೆ. ಅಂಕ ಮಾದರಿಯಲ್ಲೂ 8 ಬಾರಿ ವಿಶ್ವ ಚಾಂಪಿಯನ್ ಪಟ್ಟವೇರಿದ್ದಾರೆ. ತಂಡ ಮಾದರಿಯಲ್ಲೂ ಒಮ್ಮೆ ವಿಶ್ವ ಚಾಂಪಿಯನ್ ತಂಡದ ಭಾಗವಾಗಿದ್ದಾರೆ. 38 ವರ್ಷದ ಪಂಕಜ್ ಆಡ್ವಾಣಿ ಸೆಮೀಸ್ನಲ್ಲಿ ಮತ್ತೋರ್ವ ದೇಶಬಾಂಧವ ರೂಪೇಶ್ ಷಾ ಎದುರು 900&273ರಿಂದ ಗೆದ್ದಿದ್ದರು.
ಗೆಲುವುಗಳು ನನಗೆ ಹೊಸದಲ್ಲ. ಹಿಂದೆಯೂ ಹಲವು ಬಾರಿ ಗೆದ್ದಿರುವೆ. ಆದರೆ ಹಲವಾರು ಗಂಟೆಗಳ ಅಭ್ಯಾಸ, ಮಾನಸಿಕ-ದೈಹಿಕ ಪರಿಶ್ರಮಗಳ ಬಳಿಕ ವರ್ಷದಿಂದ ವರ್ಷಕ್ಕೆ ಇದೇ ಸಾಧನೆಯನ್ನು ಪುನರಾವರ್ತಿಸುವುದು ನಿಜಕ್ಕೂ ಶ್ರೇಷ್ಠ ಅನುಭವ. ಸ್ಥಿರತೆಯೇ ಯಶಸ್ಸಿನ ನಿಜವಾದ ಮುದ್ರೆ. ಯಾವಾಗಲೂ ದೇಶಕ್ಕಾಗಿ ಪ್ರಶಸ್ತಿಗಳನ್ನು ಗೆದ್ದುತರುವುದು ಹೆಚ್ಚು ಪ್ರೇರಣೆ ನೀಡುತ್ತದೆ ಎಂದು ಪಂಕಜ್ ಆಡ್ವಾಣಿ ಹೇಳಿದ್ದಾರೆ.
ಪಂಕಜ್ 26 ವಿಶ್ವ ಪ್ರಶಸ್ತಿಗಳು
*ವಿಶ್ವ ಬಿಲಿಯರ್ಡ್ಸ್ (ಅಂಕ ಮಾದರಿ): 8 (2005, 2008, 2014, 2016, 2017, 2018, 2019, 2022)
*ವಿಶ್ವ ಬಿಲಿಯರ್ಡ್ಸ್ (ದೀರ್ಘ ಮಾದರಿ): 9 (2005, 2007, 2008, 2009, 2012, 2014, 2015, 2018, 2023)
*ವಿಶ್ವ ತಂಡ ಬಿಲಿಯರ್ಡ್ಸ್ ಚಾಂಪಿಯನ್ಷಿಪ್: 1 (2014)
*ವಿಶ್ವ ಸ್ನೂಕರ್ ಚಾಂಪಿಯನ್ಷಿಪ್: 3 (2003, 2015, 2017)
*ವಿಶ್ವ 6-ರೆಡ್ ಸ್ನೂಕರ್: 3 (2015, 2014, 2021)
*ವಿಶ್ವ ಸ್ನೂಕರ್ ತಂಡ ಚಾಂಪಿಯನ್ಷಿಪ್: 2 (2018, 2019)