ನವದೆಹಲಿ: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ (Champions Trophy) ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದು, ಸದ್ಯ ಹುಟ್ಟಿಕೊಂಡಿರುವ ಸಮಸ್ಯೆಗಳು ದಿನ ಕಳೆದಂತೆ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಭದ್ರತೆಯ ಕಾರಣ (Security Reasons) ನೀಡಿ ಭಾರತ ಈಗಾಗಲೇ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದು, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಹೇಳಿದೆ. ಅತ್ತ ಪಾಕಿಸ್ತಾನ ಕೂಡ ಭಾರತದ ನಿಲುವಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಭಾರತ ಪಾಕ್ ನೆಲದಲ್ಲಿ ಆಡಲೇಬೇಕು ಎಂದು ಹಠ ಹಿಡಿದಿದೆ. ಭಾರತ ಹಾಗೂ ಪಾಕಿಸ್ತಾನದ ಕಿತ್ತಾಟದಿಂದಾಗಿ ಐಸಿಸಿ ಇನ್ನೂ ವೇಳಾಪಟ್ಟಿ ಪ್ರಕಟಿಸದಿರುವುದು ಬೇರೆ ತಂಡಗಳನ್ನು ಚಿಂತೆಗೆ ದೂಡುವಂತೆ ಮಾಡಿದೆ.
ಟೂರ್ನಿಗೆ ಸಂಬಂಧಿಸಿದಂತೆ ಈಗಾಗಲೇ ಚಾಂಪಿಯನ್ಸ್ ಟ್ರೋಫಿ (Champions Trophy) ಕಪ್ ಪಾಕಿಸ್ತಾನ ತಲುಪಿದ್ದು, ಆಯ್ದ ನಗರಗಳಲ್ಲಿ ಈ ಕಪ್ನ ಪ್ರದರ್ಶನ ನಡೆಯಲಿದೆ. ವಿವಾದದ ನಡುವೆಯೇ ಈಗಾಗಲೇ ಕಪ್ ಉತ್ತರ ಪಾಕಿಸ್ತಾನದ (Pakistan) ಸ್ಕರ್ಡು ನಗರದಿಂದ ಕರಾಚಿ ತಲುಪಿದ್ದು, ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದೆ. ಆದರೆ, ಭಾರತ ಭಾಗಿಯಾಗದಿದ್ದಲ್ಲಿ ಮಾತ್ರ ಪಾಕಿಸ್ತಾನ ಹಾಗೂ ಐಸಿಸಿಗೆ ಸರಿಸುಮಾರು 1,800 ಕೋಟಿ ರೂಪಾಯಿ ನಷ್ಟವಾಗುತ್ತದೆ ಎಂದು ಹೇಳಲಾಗಿದ್ದು, ಇದೀಗ ಪಿಸಿಬಿ ಹೊಸ ರಾಜಿ ಸೂತ್ರವನ್ನು ಕಂಡುಕೊಂಡಿದೆ.
ಭಾರತ (Team India) ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಭಾಗಿಯಾಗಬೇಕೆಂದು ಹಠ ಹಿಡಿದಿರುವ ಪಾಕಿಸ್ತಾನ ಹಿಂಬಾಗಿಲ ಮೂಲಕ ಬಿಸಿಸಿಐ ಹಾಗೂ ಸರ್ಕಾರದ ಜೊತೆ ಮಾತುಕತೆ ನಡೆಸಲು ಮುಂದಾಗಿದೆ. ಆದರೆ, ಕೇಳಿ ಬಂದಿರುವ ಮಾಹಿತಿ ಪ್ರಕಾರ ಭಾರತ ಒಂದು ಪಂದ್ಯವನ್ನಾದರೂ ಪಾಕಿಸ್ತಾನದಲ್ಲಿ ಆಡಬೇಕೆಂದು ಪಿಸಿಬಿ ಮನವಿ ಮಾಡಿರುವುದಾಗಿ ವರದಿಯಾಗಿದೆ. ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವುದಾಗಿ ಹೇಳಿದ್ದು, ಒಂದು ಪಂದ್ಯವನ್ನಾದರೂ ನಮ್ಮ ನೆಲದಲ್ಲಿ ಆಡಿ. ಇದಕ್ಕೆ ಬೇಕಾದ ಸೂಕ್ತ ಭದ್ರತೆಯನ್ನು ನಾವು ಒದಗಿಸುತ್ತೇವೆ ಎಂದು ಪಿಸಿಬಿ ಬಿಸಿಸಿಐಗೆ ಮಾಡಿರುವ ಹೊಸ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಕರಡು ವೇಳಾಪಟ್ಟಿಯ ಪ್ರಕಾರ, ಎರಡು ಪಂದ್ಯವನ್ನು ಭಾರತ ತಂಡ ಪಾಕಿಸ್ತಾನದಲ್ಲಿ ಆಡಿದರೆ, ಉಳಿದ ಪಂದ್ಯಗಳನ್ನು ಶ್ರೀಲಂಕಾ ಅಥವಾ ಯುಎಇನಲ್ಲಿ ಆಡಲಿದೆ. ಆದರೆ, ಈ ಪ್ರಸ್ತಾವನೆ ಇನ್ನೂ ಚರ್ಚೆಯ ಹಂತದಲ್ಲಿದ್ದು, ಇದು ಮೊದಲು ಐಸಿಸಿಗೆ ಸಲ್ಲಿಕೆಯಾಗಬೇಕಿದೆ.
ಉಗ್ರವಾದ (Terrorism) ಹಾಗೂ ಆರ್ಥಿಕ ಸಂಕಷ್ಟದಿಂದ (Financial Crisis) ಬಳಲುತ್ತಿರುವ ಪಾಕಿಸ್ತಾನಕ್ಕೆ 28 ವರ್ಷಗಳ ಬಳಿಕ ಐಸಿಸಿ ಟೂರ್ನಿ (ICC Tourney) ಆಯೋಜನೆ ಮಾಡುವ ಅವಕಾಶ ದೊರೆತ್ತಿದ್ದು, ಇದನ್ನು ಕಳೆದುಕೊಳ್ಳಲು ಪಾಕ್ ಸರ್ಕಾರ ಹಾಗೂ ಅಲ್ಲಿನ ಕ್ರಿಕೆಟ್ ಮಂಡಳಿ ಸಿದ್ದವಿಲ್ಲ. ಹೀಗಾಗಿ ಭಾರತದ ಮನವೊಲಿಸಲು ಶತಪ್ರಯತ್ನ ಮಾಡುತ್ತಿದ್ದು, ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳನ್ನು ಲಾಹೋರ್ನ ಗಡಾಫಿ ಕ್ರೀಢಾಂಗಣದಲ್ಲಿ ಬಿಗಿಭದ್ರತೆಯೊಂದಿಗೆ ನಡೆಸುವುದಾಗಿ ಹೇಳಿದೆ.
ಭಾರತ ತಂಡ (Team India) ಚಾಂಪಿಯನ್ಸ್ ಟ್ರೋಫಿ (Champions Trophy) ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗಲಿದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದ್ದು, ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾಗೆ (Team India) ಇರುವ ಕ್ರೇಜ್ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್ ಮೇಲೆ ಇರುವ ಕಳಂಕವೂ ದೂರವಾಗಲಿದೆ ಎಂಬ ನಂಬಿಕೆಯಲ್ಲಿ ಅಲ್ಲಿನ ಕ್ರಿಕೆಟ್ ಮಂಡಳಿ ಹಾಗೂ ಸರ್ಕಾರ ಕಾದು ಕುಳಿತಿದೆ. ಅಲ್ಲದೇ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಕ್ರಿಕೆಟ್ ಮೂಲಕ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ (PCB) ನಿರೀಕ್ಷೆಗೆ ಬಿಸಿಸಿಐ (BCCI) ಆಘಾತ ನೀಡಿದ್ದು, ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಕಡ್ಡಿ ಮರಿದಂತೆ ಹೇಳಿದೆ.
ಇದಲ್ಲದೆ ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಕ್ರೀಡಾಂಗಣದ ಪಕ್ಕದಲ್ಲಿರುವ ಐದು ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಭಾರತದ ಆಟಗಾರರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು 5 ಸ್ಟಾರ್ ಹೋಟೆಲ್ ನಿರ್ಮಿಸುತ್ತಿರುವುದಾಗಿ ಪಿಸಿಬಿ ತಿಳಿಸಿದೆ. ಇದಲ್ಲದೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದರಿಂದ ಉಭಯ ದೇಶಗಳ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಸರಿಹೋಗಬಹುದು ಎಂದು ಪಿಸಿಬಿ ಆಶಿಸಿದೆ. ಆದರೆ, ಪಾಕಿಸ್ತಾನ ಆಸೆಗೆ ಭಾರತ ತಣ್ಣೀರು ಎರಚಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.