ಕ್ರೀಡೆ

ಕ್ರೀಡಾಂಗಣ ನವೀಕರಣ ಕಾರ್ಯ ವಿಳಂಬ; ಪಾಕ್​ಗೆ ಎದುರಾಯ್ತು Champions Trophy ಆತಿಥ್ಯ ಕೈ ತಪ್ಪುವ ಭೀತಿ

ಮುಂಬೈ/ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ಆರಂಭಕ್ಕೆ 40 ದಿನ ಬಾಕಿ ಉಳಿದಿದ್ದು, ಟೂರ್ನಿ ಆಯೋಜನೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ಗೆ (ಐಸಿಸಿ) ಪ್ರಮುಖ ಸವಾಲು ಎದುರಾಗಿದೆ. ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಟೂರ್ನಿಯ ಆತಿಥ್ಯ ಹಕ್ಕು ಪಡೆದಿರುವ ಪಾಕಿಸ್ತಾನ, ಟೂರ್ನಿಯ ಪಂದ್ಯಗಳು ನಿಗದಿಯಾಗಿರುವ ಮೂರು ಕ್ರೀಡಾಂಗಣಗಳ ನಿರ್ಮಾಣ ಹಾಗೂ ನವೀಕರಣ ಕಾಮಗಾರಿ ಕಾರ್ಯ ವಿಳಂಬಗೊಳಿಸಿದೆ. ಇದರಿಂದಾಗಿ ಸಂಪೂರ್ಣ ಟೂರ್ನಿ ಯುಎಇಗೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಫೆ.19 ರಂದು ಪಾಕಿಸ್ತಾನ ಹಾಗೂ ಯುಎಇ ಆತಿಥ್ಯದಲ್ಲಿ ಟೂರ್ನಿ ಆರಂಭವಾಗಲಿದ್ದು, ಭಾರತ ತಂಡ ತನ್ನ ಎಲ್ಲ ಪಂದ್ಯಗಳನ್ನು ಯುಎಇನಲ್ಲಿ ಆಡಲಿದೆ. ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳು ಇನ್ನೂ ನವೀಕರಣ ಹಂತದಲ್ಲಿವೆ. ಕಳೆದ ವರ್ಷ ಆಗಸ್ಟ್​ನಲ್ಲಿ ಆರಂಭವಾದ ಕ್ರೀಡಾಂಗಣಗಳ ನಿರ್ಮಾಣ ಹಾಗೂ ನವೀರಕರಣ ಕಾಮಗಾರಿ ಕಳೆದ ಡಿಸೆಂಬರ್​ಗೆ ಮುಕ್ತಾಯಗೊಳ್ಳಬೇಕಿತ್ತು. ಆದರೆ ಈ ಮೂರು ತಾಣಗಳು ಪ್ರಸ್ತುತ ನಿರ್ಮಾಣ ಹಂತದಲ್ಲಿವೆ ಎಂದು ವರದಿಯಾಗಿದೆ. ಕಳೆದ ವರ್ಷ ಜಂಟಿ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ ವೇಳೆಯೂ ಅಮೆರಿಕದಲ್ಲಿ ನಡೆದ ಪಂದ್ಯಗಳಿಗೆ ಮೂಲ ಸೌಕರ್ಯಗಳ ಅವ್ಯವಸ್ಥೆ ಉಂಟಾಗಿತ್ತು. ಇದರಿಂದ ಅದೇ ಪರಿಸ್ಥಿತಿ ಚಾಂಪಿಯನ್ಸ್ ಟ್ರೋಫಿ (Champions Trophy) ವೇಳೆಯೂ ಉದ್ಭವಾಗುದಂತೆ ಎಚ್ಚರಿಕೆ ವಹಿಸಲು ಐಸಿಸಿ ಕಾರ್ಯಯೋಜನೆ ರೂಪಿಸಲು ಮುಂದಾಗಿದೆ. ಐಸಿಸಿ ತಂಡವೊಂದು ವಾರಾಂತ್ಯದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಕ್ರೀಡಾಂಗಣಗಳ ಪರಿಸ್ಥಿತಿಯನ್ನು ಅವಲೋಕಿಸುವ ಸಾಧ್ಯತೆಗಳಿವೆ.

ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿ ಕ್ರೀಡಾಂಗಣಗಳಲ್ಲಿ ಚಾಂಪಿಯನ್ಸ್ ಟ್ರೋಫಿ (Champions Trophy) ಲೀಗ್ ಹಂತದ ತಲಾ ಮೂರು ಪಂದ್ಯಗಳು ನಿಗದಿಯಾಗಿವೆ. ಜತೆಗೆ ಎರಡನೇ ಸೆಮಿಫೈನಲ್ ಸಹ ಲಾಹೋರ್​ನಲ್ಲಿ ನಡೆಯಲಿದೆ. ಒಂದು ವೇಳೆ ಭಾರತ ತಂಡ ಫೈನಲ್​ಗೇರುವಲ್ಲಿ ವಿಫಲವಾದರೆ, ಪ್ರಶಸ್ತಿ ಕಾದಾಟಕ್ಕೆ ಲಾಹೋರ್ ಆತಿಥ್ಯವಹಿಸಲಿದೆ. ಭಾರತ ಪ್ರಶಸ್ತಿ ಸುತ್ತಿಗೇರಿದರೆ ಫೈನಲ್ ದುಬೈನಲ್ಲಿ ನಡೆಯಲಿದೆ.

ಕಾಮಗಾರಿ ಪೂರ್ಣಕ್ಕೆ 25ರ ಗಡುವು!: ಬರೋಬ್ಬರಿ 30 ವರ್ಷಗಳ ಬಳಿಕ ಐಸಿಸಿ ಟೂರ್ನಿಯ ಆತಿಥ್ಯ ಪಾಕಿಸ್ತಾನಕ್ಕೆ ಒಲಿದಿದ್ದು, ಚಾಂಪಿಯನ್ಸ್ ಟ್ರೋಫಿ (Champions Trophy) ಆಯೋಜನೆಗಾಗಿ ಪ್ರಮುಖ ಕ್ರೀಡಾಂಗಣಗಳ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಂದಾಗಿತ್ತು. ಸ್ಟೇಡಿಯಂಗೆ ಹೆಚ್ಚುವರಿ ಆಸನಗಳ ಅಳವಡಿಕೆ ಸೇರಿ ಫ್ಲಡ್​ಲೈಟ್ ಮತ್ತು ಮೈದಾನದ ಔಟ್​ಫೀಲ್ಡ್​ಗಳ ನವೀಕರಣ ಕಾರ್ಯವನ್ನು ಕಳೆದ ಆಗಸ್ಟ್​ನಲ್ಲಿ ಆರಂಭಗೊಳಿಸಲಾಗಿತ್ತು. ಜತೆಗೆ ಕ್ರೀಡಾಂಗಣಗಳನ್ನು ಸಂಪೂರ್ಣವಾಗಿ ಸಿದ್ಧಗೊಳಿಸಲು ಡಿಸೆಂಬರ್​ನ ಗಡುವು ಐಸಿಸಿ ನೀಡಿತ್ತು. ಆದರೆ ಹವಾಮಾನದ ವೈಪರೀತ್ಯದಿಂದಾಗಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಲ್ಲಿ ಪಿಸಿಬಿ ಹಿಂದೆ ಉಳಿದಿದೆ. ನಿಯಮಗಳ ಪ್ರಕಾರ, ಯಾವುದೇ ಐಸಿಸಿ ಅಂತಾರಾಷ್ಟ್ರೀಯ ಟೂರ್ನಿಗೆ ಆತಿಥ್ಯವಹಿಸಿಕೊಂಡ ಕ್ರಿಕೆಟ್ ಮಂಡಳಿ ಒಂದು ವಾರ ಮುಂಚಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ಗೆ (ಐಸಿಸಿ) ಟೂರ್ನಿಯ ಪಂದ್ಯಗಳು ನಿಗದಿಯಾಗಿರುವ ತಾಣಗಳ ಜವಾಬ್ದಾರಿಯನ್ನು ಹಸ್ತಾಂತರಿಸಬೇಕು. ಪಿಸಿಬಿ ಮೂರು ಕ್ರೀಡಾಂಗಣಗಳನ್ನು ಐಸಿಸಿಗೆ ಒಪ್ಪಿಸಲು ಫೆಬ್ರವರಿ 16ರ ಅಂತಿಮ ಗಡುವು ಹೊಂದಿದ್ದು, ಇದಕ್ಕೂ ಮುನ್ನ ಜನವರಿ 25ರೊಳಗೆ ಕ್ರೀಡಾಂಗಣಗಳ ನವೀಕರಣ ಸೇರಿ ಇತರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ. ಒಂದು ವೇಳೆ ಈ ಗಡುವಿನ ಜತೆಗೆ ಅಗತ್ಯ ಸೌಕರ್ಯಗಳನ್ನು ಪೂರೈಸಲು ಪಿಸಿಬಿ ವಿಫಲವಾದರೆ, ಟೂರ್ನಿಯ ಆತಿಥ್ಯ ಕೈ ತಪ್ಪಲಿದೆ. ಟೂರ್ನಿಯ ಭವಿಷ್ಯದ ಬಗ್ಗೆ ಮುಂದಿನ ವಾರದೊಳಗೆ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.

ಪ್ರಮುಖ ಟೂರ್ನಿ ಆಯೋಜನೆಗೆ ಸಿದ್ಧ: ಚಾಂಪಿಯನ್ಸ್ ಟ್ರೋಫಿ (Champions Trophy) ಟೂರ್ನಿಯೂ ಸಂಪೂರ್ಣವಾಗಿ ಯುಎಇಗೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ ಎಂಬ ವರದಿ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ‘ಚಾಂಪಿಯನ್ಸ್ ಟ್ರೋಫಿ ಸೇರಿ ಇತರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಎಲ್ಲ ತಾಣಗಳು ಸಿದ್ಧವಾಗಿವೆ. ನವೀಕರಣದ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಜ.25ರ ಗಡುವಿನೊಳಗೆ ಅಗತ್ಯ ಸೌಕರ್ಯಗಳನ್ನು ಪೂರೈಸುವುದರ ಜತೆಗೆ ಮುಂಬರುವ ದಿನಗಳಲ್ಲಿ ಪ್ರಮುಖ ಕ್ರಿಕೆಟ್ ಟೂರ್ನಿಗಳ ಆಯೋಜನೆಗೆ ಬದ್ಧ ಎಂದು ಪ್ರಕಟಣೆ ನೀಡಿದೆ.

ತ್ರಿಕೋನ ಸರಣಿ ಸ್ಥಳಾಂತರ: ಟೂರ್ನಿಯ ಪೂರ್ವ ಸಿದ್ಧತೆಯಾಗಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ 4 ಪಂದ್ಯಗಳ ತ್ರಿಕೋನ ಸರಣಿಯನ್ನು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಆತಿಥ್ಯತಾಣ ಗಳಾದ ಲಾಹೋರ್​ನ ಗಡಾಫಿ ಹಾಗೂ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಈ ಸರಣಿಯನ್ನು ಪ್ರಮುಖ ಎರಡು ತಾಣಗಳಲ್ಲಿ ಆಯೋಜಿಸುವ ಮೂಲಕ ಐಸಿಸಿ ಟೂರ್ನಿಯ ಆತಿಥ್ಯಕ್ಕೆ ಸಿದ್ಧವಾಗಿರುವುದನ್ನು ಸ್ಪಷ್ಟಪಡಿಸುವುದು ಪಿಸಿಬಿಯ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ನವೀಕರಣ ಕಾರ್ಯ ನಡೆಸಲಾಗುತ್ತಿದೆ.