ಬೆಂಗಳೂರು: ಭಾರತ ತಂಡ ಅಂಧರ ಟಿ20 ಕ್ರಿಕೆಟ್ ಏಷ್ಯಾಕಪ್ ಟೂರ್ನಿಯ ತನ್ನ 2ನೇ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೊನೇ ಎಸೆತದಲ್ಲಿ 1 ವಿಕೆಟ್ನಿಂದ ವೀರೋಚಿತ ಸೋಲು ಅನುಭವಿಸಿದೆ.
ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತ ತಂಡ 6 ವಿಕೆಟ್ಗೆ 179 ರನ್ ಕಲೆಹಾಕಿತು. ನಾಯಕ ಟಿ. ದುರ್ಗಾ ರಾವ್ ಗರಿಷ್ಠ 61 ರನ್ ಬಾರಿಸಿದರು. ಪ್ರತಿಯಾಗಿ ಪಾಕಿಸ್ತಾನ ಕೊನೇ ಎಸೆತದಲ್ಲಿ 9 ವಿಕೆಟ್ಗೆ 180 ರನ್ ಕಲೆಹಾಕಿ ರೋಚಕ ಗೆಲುವು ಸಾಧಿಸಿತು.
ಪಾಕ್ ನಾಯಕ ನಿಸರ್ ಅಲಿ 64 ರನ್ ಸಿಡಿಸಿ ಗೆಲುವು ಕಸಿದರು. ಭಾರತ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 179 ರನ್ಗಳಿಂದ ಗೆದ್ದಿತ್ತು. ಭಾರತ ಇನ್ನು ಗುರುವಾರ ಆತಿಥೇಯ ಬಾಂಗ್ಲಾದೇಶ ವಿರುದ್ಧ ತನ್ನ ಅಂತಿಮ ಲೀಗ್ ಪಂದ್ಯ ಆಡಲಿದೆ.