ಕ್ರೀಡೆ

ಪಾಕಿಸ್ತಾನಕ್ಕೆ ಇಂದು ಆಸ್ಟ್ರೇಲಿಯಾ ಸವಾಲು ; ಯಾರಿಗೆ ಒಲಿಯಲಿದೆ ಫೈನಲ್ ಟಿಕೆಟ್?

ದುಬೈ: ಲೀಗ್ ಹಂತದಲ್ಲಿ ಅಜೇಯ ಸಾಧನೆ ಮಾಡಿರುವ ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಹಣಾಹಣಿಯಲ್ಲಿ ಗುರುವಾರ, ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. 2016ರ ಆವೃತ್ತಿಯಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದ ಪಾಕಿಸ್ತಾನ ತಂಡ, ಪ್ರಸಕ್ತ ಟೂರ್ನಿಯಲ್ಲಿ ಇದುವರೆಗೆ ಅಜೇಯ ಸಾಧನೆ ಮಾಡಿರುವ ಏಕೈಕ ತಂಡ ಎನಿಸಿದೆ. 2010ರ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಮೈಕೆಲ್ ಹಸ್ಸೆ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಾಕ್ ಎದುರು ರೋಚಕ ಜಯ ದಾಖಲಿಸಿತ್ತು. ಯುಎಇ ನೆಲವನ್ನು ಎರಡನೇ ತವರನ್ನಾಗಿ ಆಯ್ದುಕೊಂಡಿರುವ ಪಾಕಿಸ್ತಾನ ತಂಡ 3ನೇ ಬಾರಿ ಫೈನಲ್ ಪ್ರವೇಶಿಸುವ ಕನಸಿನಲ್ಲಿದೆ. ಮತ್ತೊಂದೆಡೆ, ಇದುವರೆಗೂ ಚುಟುಕು ಕ್ರಿಕೆಟ್ ವಿಶ್ವ ಕಿರೀಟ ಜಯಿಸಲು ವಿಫಲವಾಗಿರುವ ಆಸ್ಟ್ರೇಲಿಯಾ ತಂಡ ಎರಡನೇ ಬಾರಿ ಫೈನಲ್ ಪ್ರವೇಶಿಸುವ ಕನಸಿನಲ್ಲಿದೆ.

ಭಾರತ ಎದುರು ಐತಿಹಾಸಿಕ ಜಯ ದಾಖಲಿಸಿದ ಬಳಿಕ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳ ಎದುರು ಪರದಾಡಿ ಗೆದ್ದಿದ್ದ ಪಾಕ್ ತಂಡಕ್ಕೆ ನಾಯಕ ಬಾಬರ್ ಅಜಮ್, ಮೊಹಮದ್ ರಿಜ್ವಾನ್, ಅನುಭವಿಗಳಾದ ಶೋಯಿಬ್ ಮಲಿಕ್, ಮೊಹಮದ್ ಹಫೀಜ್, ಆಸಿಫ್ ಅಲಿ ಒಳಗೊಂಡ ಬ್ಯಾಟಿಂಗ್ ಪಡೆಯೇ ಶಕ್ತಿಯಾಗಿದ್ದರೆ, ವೇಗಿ ಶಹೀನ್ ಷಾ ಅಫ್ರಿದಿ ಲಯದಲ್ಲಿದ್ದರೆ, ಹಸನ್ ಅಲಿ ದುಬಾರಿಯಾಗುತ್ತಿದ್ದಾರೆ.

ಗೆಲುವಿನ ಕನಸಿನಲ್ಲಿ ಆಸೀಸ್: ರನ್‌ರೇಟ್ ಲೆಕ್ಕಾಚಾರದಲ್ಲಿ ದ.ಆಫ್ರಿಕಾ ತಂಡವನ್ನು ಹಿಂದಿಕ್ಕಿ ಸೆಮೀಸ್ ಹಂತಕ್ಕೇರಿರುವ ಆಸ್ಟ್ರೇಲಿಯಾ ತಂಡಕ್ಕೆ ಬ್ಯಾಟರ್‌ಗಳ ನಿಸ್ತೇಜ ನಿರ್ವಹಣೆ ಕಾಡುತ್ತಿದೆ. ಅದರಲ್ಲೂ ಲೀಗ್ ಹಂತದಲ್ಲಿ ಇಂಗ್ಲೆಂಡ್ ಎದುರು ಹೀನಾಯ ನಿರ್ವಹಣೆಯಿಂದ ಟೀಕೆಗೆ ಗುರಿಯಾಗಿತ್ತು. ಜೋಸ್ ಹ್ಯಾಸಲ್‌ವುಡ್, ಆಡಂ ಜಂಪಾ, ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮ್ಮಿನ್ಸ್ ಒಳಗೊಂಡ ಬೌಲಿಂಗ್ ವಿಭಾಗವೇ ತಂಡದ ಜೀವಾಳವಾಗಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಮುಖಾಮುಖಿ: 23

ಪಾಕಿಸ್ತಾನ: 13

ಆಸ್ಟ್ರೇಲಿಯಾ: 9

ರದ್ದು: 1

ಟಿ20 ವಿಶ್ವಕಪ್‌ನಲ್ಲಿ: 6

ಪಾಕಿಸ್ತಾನ: 3

ಆಸ್ಟ್ರೇಲಿಯಾ: 3